ಹಿಂದಿನ ಮುಖ್ಯಮಂತ್ರಿಗಳು ಇಂತಹ ದ್ವೇಷ ರಾಜಕಾರಣ ಮಾಡಿಲ್ಲ. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

ಬೆಂಗಳೂರು (ಸೆ.12): ‘ನೀವು ಕರ್ನಾಟಕದಲ್ಲಿ ಮಾತ್ರ ಇದೀರಿ. ನಾವು ಕೇಂದ್ರದಲ್ಲಿ ಇದ್ದೇವೆ. ಮುಂದೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಬರಲಿದೆ. ಆಗ ನೀವು ನಮ್ಮ ಬಳಿ ಬಂದು ಬೆಗ್‌ (ಭಿಕ್ಷೆ) ಮಾಡಬೇಕಾಗುತ್ತದೆ. ಆ ಸ್ಥಿತಿ ನಿಮಗೆ ಬರುತ್ತದೆ ನೆನಪಿಡಿ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಆಡಳಿತಾರೂಢ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿ ದ್ವೇಷ ರಾಜಕಾರಣ ಮಾಡಿದರೆ ಬಿಜೆಪಿ ಕೂಡ ಮುಂದೆ ಅಧಿಕಾರಕ್ಕೆ ಬಂದಾಗ ಇದೇ ರೀತಿ ಮಾಡುತ್ತದೆ.

ಹಿಂದಿನ ಮುಖ್ಯಮಂತ್ರಿಗಳು ಇಂತಹ ದ್ವೇಷ ರಾಜಕಾರಣ ಮಾಡಿಲ್ಲ. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿರುವುದನ್ನು ವಿರೋಧಿಸಿ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಬಂದ್‌ ನಡೆದಿದೆ. ಅಲ್ಲಿನ ಹಿಂದೂಗಳಿಗೆ ಬೆಂಬಲ ನೀಡಲು ಹೋಗಿ ಭಾಷಣ ಮಾಡಿದ್ದೇವೆ. ಸಿ.ಟಿ.ರವಿ ಅವರು ದ್ವೇಷ ಭಾಷಣ ಮಾಡಿಲ್ಲ. ಮುಸ್ಲಿಮರು ಪಾಕಿಸ್ತಾನ ಜಿಂದಾಬಾದ್‌ ಅಂದರೂ ಕೇಸು ದಾಖಲಿಸಿಲ್ಲ.

ಆದರೆ ರವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ರೀತಿ ಪ್ರಕರಣ ದಾಖಲಿಸಲು ಸಚಿವರ ತಂಡ ರಚಿಸಲಾಗಿದೆ. ಇದು ಸರ್ಕಾರಕ್ಕೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿತ್ತು. ಈಗ ಮಂಡ್ಯ, ಮೈಸೂರು ಭಾಗಗಳಲ್ಲಿ ಈ ರೀತಿ ಮಾಡುತ್ತಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಮುಸ್ಲಿಮರೇ ಕಲ್ಲು ತೂರಾಟ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾರೆ. ಮಸೀದಿ ಅಧ್ಯಕ್ಷರು ಕೂಡ ಅದನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಲಿ ಎಂದರು.

ಮುಸ್ಲಿಮರ ಬಗ್ಗೆ ನಮಗೇನೂ ತಕರಾರಿಲ್ಲ

ಮುಸ್ಲಿಮರಲ್ಲೇ ಭಾರತದ ವಿರುದ್ಧ ಹಾಗೂ ಭಾರತದ ಪರವಾಗಿ ಇರುವ ಎರಡು ತಂಡ ಇದೆ. ನಾವೇನೂ ಮುಸ್ಲಿಮರ ವಿರುದ್ಧವಾಗಿಲ್ಲ. ಅಬ್ದುಲ್‌ ಕಲಾಂ ಅವರನ್ನೇ ರಾಷ್ಟ್ರಪತಿಯಾಗಿ ಒಪ್ಪಿಕೊಂಡಿದ್ದೇವೆ. ಶಿಶುನಾಳ ಷರೀಫರ ಹಾಡುಗಳನ್ನು ನಾನು ಕೇಳಿ ಗೌರವಿಸುತ್ತೇನೆ. ಕವಿ ನಿಸಾರ್‌ ಅಹ್ಮದ್‌ ನನ್ನ ಕ್ಷೇತ್ರದಲ್ಲೇ ಇದ್ದು, ಅವರ ಹೆಸರು ಉಳಿಸಲು ಐದು ಎಕರೆ ಜಮೀನು ಕೊಡಿಸಿದ್ದೆ. ಇಂತಹ ದೇಶಪ್ರೇಮಿ ಮುಸ್ಲಿಮರ ಬಗ್ಗೆ ನಮಗೇನೂ ತಕರಾರಿಲ್ಲ. ದ್ವೇಷ ಕಾರುವ ಮುಸ್ಲಿಮರನ್ನು ನಾವು ವಿರೋಧಿಸುತ್ತೇವೆ ಎಂದು ಅಶೋಕ್‌ ಹೇಳಿದರು.