ರಾಜ್ಯ ಸಂಪುಟ ಸಭೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ಬಗ್ಗೆ ನಿರ್ಬಂಧದ ತೀರ್ಮಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಕ್ಯಾಬಿನೆಟ್ ನಿರ್ಧಾರದಲ್ಲಿ ಸಂಘ ಸಂಸ್ಥೆ ಅಂತಾ ಬರೆದಿದ್ದಾರೆ. ಸರ್ಕಾರ ಆದೇಶ ಮಾಡಲಿ ಮುಂದೆ ನೋಡೋಣ.
ನವದೆಹಲಿ (ಅ.17): ರಾಜ್ಯ ಸಂಪುಟ ಸಭೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ಬಗ್ಗೆ ನಿರ್ಬಂಧದ ತೀರ್ಮಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ‘ಕಾಂಗ್ರೆಸ್‌ನಲ್ಲಿನ ಒಳಬೇಗುದಿ ಮರೆ ಮಾಡುವ ಸಲುವಾಗಿ ಸಂಪುಟ ಸಭೆಯು ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದೆ’ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಅವರು, ‘ಕ್ಯಾಬಿನೆಟ್ ನಿರ್ಧಾರದಲ್ಲಿ ಸಂಘ ಸಂಸ್ಥೆ ಅಂತಾ ಬರೆದಿದ್ದಾರೆ. ಈಗ ಸರ್ಕಾರದ ವಿರುದ್ಧ ವಾತಾವರಣ ಮೂಡ್ತಿದೆ. ಹಾಗಾಗಿ, ಸರ್ಕಾರದ ವೈಫಲ್ಯದ ಬಗ್ಗೆ, ಒಳಜಗಳದ ಬಗ್ಗೆ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶಕ್ಕಾಗಿ ಹೀಗೆ ಮಾಡ್ತಿದ್ದಾರೆ’ ಎಂದರು.
‘ಸಂಘದ ನಿತ್ಯದ ಚಟುವಟಿಕೆಗಳ ಮೇಲೆ ನಿರ್ಬಂಧ ತರವಲ್ಲ. ಮೊದಲು ಸರ್ಕಾರ ಆದೇಶ ಮಾಡಲಿ ಮುಂದೆ ನೋಡೋಣ. ಶಾಲೆ ಮೈದಾನದಲ್ಲಿ ಕಾರ್ಯಕ್ರಮ ಆಗುತ್ತದೆ ಅನುಮತಿ ತೆಗೆದುಕೊಳ್ಳುತ್ತಾರೆ’ ಎಂದರು. ಕಾಂಗ್ರೆಸ್‌ನ ಭರವಸೆಗಳ ಬಗ್ಗೆ ಮಾತನಾಡಿದ ಸಚಿವರು, ‘ಒಂದು ವರ್ಷದ ಹಿಂದೆ ಎಲ್ಲಾ ಶಾಸಕರಿಗೆ 10 ಕೋಟಿ ರು. ಕೊಡುತ್ತೀನಿ ಎಂದು ಹೇಳಿದ್ದರು, ಆದರೆ ಅದ್ಯಾವುದು ಇದುವರೆಗೆ ಬಂದಿಲ್ಲ. ರಸ್ತೆಗಳ ಗುಂಡಿಗಳು ಇನ್ನೂ ಸರಿಯಾಗಿಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ಚರ್ಚೆ ಆಗಬೇಕಿದೆ. ನೀರಾವರಿ ಬಗ್ಗೆ ಚರ್ಚೆ ಆಗಬೇಕು, ಕೃಷ್ಣ ಬಗ್ಗೆ ಯಾವ ಭರವಸೆ ಕೊಟ್ಟಿದ್ದರು.
ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಇನ್ನು ಈಡೇರಿಲ್ಲ, ಎಲ್ಲರಿಗೂ ಫ್ರೀ ಅಂತಾ ಹೇಳಿದ್ರು, ಆದ್ರೆ, ಈಗ ಎಲ್ಲವೂ ಬದಲಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕ ಕೂಡ ಜಾಸ್ತಿ ಮಾಡಿದ್ದಾರೆ. ಹಲವೆಡೆ ಸ್ಥಳೀಯ ಸಂಸ್ಥೆಗಳ ವೇತನ ಇನ್ನೂ ನೀಡಿಲ್ಲ. ಬಿಬಿಎಂಪಿ ಚುನಾವಣೆ ನಡೆಸಲು ಕೋರ್ಟ್ ಸೂಚಿಸಿದೆ ಆದರೂ ಆಗಿಲ್ಲ, ಬದಲಿಗೆ ಕೆಲ ಯೋಜನೆ ಕೊಟ್ಟು ಸುಮ್ಮನಾಗಿದ್ದಾರೆ. ಇದು ಸರ್ಕಾರದ ಟೋಟಲ್ ವೈಫಲ್ಯವಾಗಿದೆ ಎಂದು ಕಿಡಿಕಾರಿದರು.
ಹಿಂದೂ ವಿರೋಧಿ ನೀತಿಗೆ ಜನಾಕ್ರೋಶ
ಡಿಜೆ ಬ್ಯಾನ್ ಹಿಂದೂಗಳಿಗೆ ಮಾತ್ರ ಮಾಡುತ್ತಿದ್ದಾರೆ. ಇದರ ಹಿಂದೆ ರಾಜ್ಯ ಸರ್ಕಾರದ ಪಿತೂರಿಯಿದೆ. ಹುಬ್ಬಳ್ಳಿ, ಬೆಂಗಳೂರಿನ ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಕಾರ್ಯಕ್ರಮ ಮಾಡುತ್ತಾರೆ. ಈ ರೀತಿಯ ತಾರತಮ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಬಗ್ಗೆ ಜನಾಕ್ರೋಶವಿದೆ ಎಂದು ಹೇಳಿದರು. ಸರ್ಕಾರದ ಒತ್ತಡಕ್ಕೆ ಮಣಿದು ಗಣಪತಿ ವಿಸರ್ಜನೆ ವಿಳಂಬವಾಯಿತು. ಡಿಜೆ ಬ್ಯಾನ್ ಮಾಡಲು ರಾಜ್ಯ ಸರ್ಕಾರದ ಪಿತೂರಿಯಿದೆ. ಡಿಜೆ ನಿಷೇಧ ಆದೇಶ ಹಿಂದೂಗಳಿಗೆ ಮಾತ್ರ ಅನ್ವಯವಾಗುತ್ತದೆಯಾ? ಎಂದು ಪ್ರಶ್ನಿಸಿದ ಅವರು, ಇವರ ಯಡವಟ್ಟಿನಿಂದ ಹೀಗಾಗಿದೆ.
ಮುಂದಿನ ಸಲ ಹೀಗೆ ಮಾಡಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದರು. ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಕಡಿವಾಣ ವಿಚಾರವಾಗಿ ಮಾತನಾಡಿದ ಅವರು, ಇಂತಹ ಪತ್ರಗಳು ಬಂದು ಹೋಗಿವೆ. ಪ್ರಿಯಾಂಕ್ ಖರ್ಗೆ ಅವರಿಗೆ ಇದು ಗೊತ್ತಿಲ್ಲ. ರಾಹುಲ್ ಗಾಂಧಿ ಅವರ ಪಕ್ಷದ ಹಿರಿಯರಾದ ನರಸಿಂಹರಾವ್ ಅವರು ಕಡಿವಾಣ ಹಾಕಲು ಮುಂದಾಗಿದ್ದರು. ದೇಶದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿದೆ. ಒಂದು ವೇಳೆ ಬ್ಯಾನ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದರು.
