ಕರಾವಳಿ ಭಾಗದಲ್ಲಿ ಕೋಲ ಸೇರಿ ಕೆಲ ಆಚರಣೆಗಳು ರಾತ್ರಿ ವೇಳೆಯೇ ನಡೆಯುವುದು ಸಾಂಪ್ರದಾಯ. ಉರುಸ್‌ ಸಹ ರಾತ್ರಿ ವೇಳೆ ನಡೆಯುತ್ತದೆ. ಹಳೇ ಮೈಸೂರು ಭಾಗದಲ್ಲೂ ರಾತ್ರಿ ಆಚರಣೆಗಳಿವೆ.

ವಿಧಾನಸಭೆ (ಆ.21): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸರ ಅಡ್ಡಿ ವಿಚಾರ ವಿಧಾನಸಭೆಯಲ್ಲಿ ಚರ್ಚೆ ನಡೆದು ಈ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ಕೆಲ ವಾಕ್ಸಮರಕ್ಕೂ ಕಾರಣವಾಯಿತು. ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬಹರಿದಿನಗಳ ಆಚರಣೆಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ಇತ್ತೀಚೆಗೆ ಕೃಷ್ಣ ಜನ್ಮಾಷ್ಠಮಿ ವೇಳೆ ರಾತ್ರಿ 10 ಗಂಟೆ ಬಳಿಕ ಆಚರಣೆ ಮಾಡದಂತೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಸೌಂಡ್‌ ಸಿಸ್ಟಂಗಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಆಯೋಜಕರು ಮತ್ತು ಸೌಂಡ್‌ ಸಿಸ್ಟಂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಶ್ನೆ ಮಾಡಿದರೆ ನ್ಯಾಯಾಲಯ ಮತ್ತು ಸರ್ಕಾರದ ಆದೇಶ ಎನ್ನುತ್ತಾರೆ. ಈ ಕಾಂಗ್ರೆಸ್‌ ಸರ್ಕಾರ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪಕ್ಷದ ಹೆಸರು ತೆಗೆಯಬೇಡಿ ಎಂದು ಸಚಿವರಾದ ಚಲುವರಾಯಸ್ವಾಮಿ ಮತ್ತು ಶಿವಾನಂದ ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌ ಯು.ಟಿ.ಖಾದರ್‌, ಕಾನೂನು ಮತ್ತು ಸಂಪ್ರದಾಯ ಬೇರೆ ಬೇರೆ. ಕಾನೂನು ಮುರಿಯಬಹುದು. ಸಂಪ್ರದಾಯದ ವಿಚಾರದಲ್ಲಿ ಅದು ಸುಲಭವಲ್ಲ.

ಹಾಗಾಗಿ ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಪರಿಹಾರವಲ್ಲ. ಸಕಾರಾತ್ಮಕವಾಗಿ ಚಿಂತಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಕರಾವಳಿ ಭಾಗದಲ್ಲಿ ಕೋಲ ಸೇರಿ ಕೆಲ ಆಚರಣೆಗಳು ರಾತ್ರಿ ವೇಳೆಯೇ ನಡೆಯುವುದು ಸಾಂಪ್ರದಾಯ. ಉರುಸ್‌ ಸಹ ರಾತ್ರಿ ವೇಳೆ ನಡೆಯುತ್ತದೆ. ಹಳೇ ಮೈಸೂರು ಭಾಗದಲ್ಲೂ ರಾತ್ರಿ ಆಚರಣೆಗಳಿವೆ. ಮುಂದೆ ಗಣೇಶ ಹಬ್ಬ ಬರುತ್ತಿದೆ. ಈ ಕಿವುಡು-ಕುರುಡು ಸರ್ಕಾರದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿವಿದರು.

ಬಿಜೆಪಿ ಸದಸ್ಯ ಭರತ್‌ ಶೆಟ್ಟಿ ಮಾತನಾಡಿ, ಕರಾವಳಿ ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ಒತ್ತಡದಲ್ಲೇ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಷ್ಟ. ಪೊಲೀಸರು ಸೌಂಡ್‌ ಸಿಸ್ಟಂ ಡೆಸಿಬಲ್‌ ಚೆಕ್‌ ಮಾಡದೇ ಸೀಜ್‌ ಮಾಡುತ್ತಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಬಿಜೆಪಿಯ ವಿ.ಸುನೀಲ್‌ ಕುಮಾರ್‌, ಸಾಮಾನ್ಯವಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಗಣೇಶೋತ್ಸವ ಮಾಡಲಾಗುತ್ತದೆ. ಆದರೆ, ಶಿಕ್ಷಣ ಇಲಾಖೆ ಈ ಬಾರಿ ಸರ್ಕಾರಿ ಶಾಲಾ ಆವರಣದಲ್ಲಿ ಗಣೇಶೋತ್ಸವ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ ಎಂದು ಸರ್ಕಾರದ ಗಮನ ಸೆಳೆದರು.

ಈ ವಿಚಾರದ ಚರ್ಚೆ ಅಪ್ರಸ್ತುತ: ಕಾಂಗ್ರೆಸ್‌ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ರಾತ್ರಿ ಮತ್ತು ಮುಂಜಾನೆ ಆಜಾನ್‌ ಕೂಗುವುದನ್ನು ನಿಷೇಧಿಸುವಂತೆ ಬಿಜೆಪಿಗರು ಒತ್ತಾಯಿಸಿದ್ದರು. ಪೊಲೀಸರು ಕಾನೂನು ಪ್ರಕಾರ ಅವರ ಕೆಲಸ ಮಾಡುತ್ತಿದ್ದಾರೆ. ಸೌಂಡ್‌ ಸಿಸ್ಟಮ್‌ ವಿಚಾರ ಇಲ್ಲಿ ಚರ್ಚಿಸುವುದೇ ಅಪ್ರಸ್ತುತ. ಬೇಕಿದ್ದರೆ ಕಾನೂನು ಬದಲಾವಣೆ ಮಾಡಿ ಎಂದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಈ ವೇಳೆ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ನೀವು ಆಜಾನ್‌ ನಿಲ್ಲಿಸಿ, ನಾವು ಸೌಂಡ್‌ ಸಿಸ್ಟಮ್‌ ಹಾಕುವುದನ್ನು ನಿಲ್ಲಿಸುತ್ತೇವೆ. ಮೊದಲಿಗೆ ನಿಮ್ಮ ಮಳವಳ್ಳಿ ಕ್ಷೇತ್ರದಲ್ಲೇ ಆಜಾನ್‌ ನಿಲ್ಲಿಸಿ ಎಂದು ಕಾಂಗ್ರೆಸ್‌ ಶಾಸಕ ನರೇಂದ್ರಸ್ವಾಮಿಗೆ ಸವಾಲು ಹಾಕಿದರು.

ಈ ವೇಳೆ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕಾನೂನಿನಿಂದ ಯಾರದೇ ಭಾವನೆಗಳಿಗೆ ತೊಂದರೆಯಾಗಬಾರದು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಬಹುತೇಕ ಕಡೆ ಸಾಂಪ್ರದಾಯಿಕ ಆಚರಣೆಗಳಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಕರಾವಳಿ ಸಮಸ್ಯೆ ಕುರಿತು ಶಿಕ್ಷಣ ಸಚಿವರು ಹಾಗೂ ಗೃಹಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದು ಚರ್ಚೆಗೆ ಇತಿಶ್ರೀ ಹಾಡಿದರು.