ರಾಜಧಾನಿಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು (ಅ.10): ರಾಜಧಾನಿಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಕಿದ್ವಾಯಿ ಆಸ್ಪತ್ರೆಯ ಯೋಜನೆಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಕಿದ್ವಾಯಿ ಆಸ್ಪತ್ರೆ 720 ಹಾಸಿಗೆ ಸಾಮರ್ಥ್ಯದಿಂದ ಕೂಡಿದೆ. ಆದರೆ, ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ 450 ಹಾಸಿಗೆಯ ಹೊಸ ಬ್ಲಾಕ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಸಂಬಂಧ ಶೀಘ್ರ ನೀಲನಕ್ಷೆ ಸಲ್ಲಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಿದ್ವಾಯಿ ಆಸ್ಪತ್ರೆಗೆ ಬಹಳ ದೂರದ ಊರುಗಳಿಂದ ಚಿಕಿತ್ಸೆಗೆ ಬರುತ್ತಾರೆ. ರೋಗ ನಿರ್ಣಯಕ್ಕಾಗಿ ಬರುವವರಿಗೆ ಅಂತಿಮ ವರದಿಗಳು ದೊರೆಯುವವರೆಗೆ ಆಸ್ಪತ್ರೆ ವಾರ್ಡ್‌ಗಳಲ್ಲಿ ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕು. ವಿಶೇಷವಾಗಿ ಉತ್ತರ ಕರ್ನಾಟಕದವರಿಗೆ ಈ ರೀತಿಯ ಆಶ್ರಯದ ಅಗತ್ಯವಿದೆ. ಸರ್ಕಾರದ ಉದ್ದೇಶದಂತೆ ಬಡವರಿಗೆ ಚಿಕಿತ್ಸೆಯು ಕೈಗೆಟುಕುವ ದರದಲ್ಲಿ ನೀಡುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು. ಹೆರಿಗೆ ರಜೆ ಮೇಲೆ ತೆರಳಿದ ದಾದಿಯರಿಗೆ ಪೂರ್ಣ ವೇತನ ನೀಡುತ್ತಿಲ್ಲ ಎಂಬ ದೂರುಗಳ ಬಗ್ಗೆ ಪರಿಶೀಲಿಸಿದ ಸಚಿವರು, 2021ರಿಂದ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹೆರಿಗೆ ರಜೆ ಅವಧಿಗೆ ಪೂರ್ಣ ವೇತನ ಬಿಡುಗಡೆ ಮಾಡಲು ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ಅವರಿಗೆ ಸೂಚಿಸಿದರು.
ಜಿಲ್ಲೆಗಳಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳು
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ದೊರಕಿಸಿಕೊಡಲು ಮುಂಬರುವ ತಿಂಗಳುಗಳಲ್ಲಿ ತುಮಕೂರು, ಮೈಸೂರು, ಮಂಡ್ಯ ಮತ್ತು ಕಾರವಾರದಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು (ಪಿಸಿಸಿ) ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು. ಈಗಾಗಲೇ ಕಲಬುರಗಿಯಲ್ಲಿ 80 ಹಾಸಿಗೆಯುಳ್ಳ ಪಿಸಿಸಿ ಇದೆ. ಇಲ್ಲಿ ಹೆಚ್ಚುವರಿಯಾಗಿ 210 ಹಾಸಿಗೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ ಅಗತ್ಯ ಕಟ್ಟಡ ನಿರ್ಮಾಣ ಮಾಡಲಾಗುವುದು. ಮುಂಬರುವ ತಿಂಗಳುಗಳಲ್ಲಿ ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಪಿಸಿಸಿಗಳನ್ನು ಆರಂಭಿಸಲಾಗುವುದು. ಜೊತೆಗೆ ಬಳ್ಳಾರಿ, ಶಿವಮೊಗ್ಗ, ರಾಯಚೂರು, ಬೀದರ್ ಮತ್ತು ಬೆಳಗಾವಿಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ಇದೆ ಎಂದರು.
