ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಶೈಕ್ಷಣಿಕ ಅರ್ಹತೆ ಮತ್ತು ರಾಜಕೀಯ ಪ್ರಭಾವವನ್ನು ಪ್ರಶ್ನಿಸಿದ್ದಾರೆ. ಪಿಯುಸಿ ಫೇಲಾದ ಮಗನಿಗೆ ಪ್ರಮುಖ ಖಾತೆ ನೀಡಿ ಬೆಂಗಳೂರಿಗೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಆರೋಪಿಸಿದರು.
ಮೈಸೂರು (ಅ.23): ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರಾಜಕೀಯ ಪ್ರಭಾವದಿಂದ ತಮ್ಮ ಪಿಯುಸಿ ಫೇಲಾದ ಮಗನಿಗೆ (ಪ್ರಿಯಾಂಕ್ ಖರ್ಗೆ) ರಾಜ್ಯದ ಪ್ರತಿಷ್ಠಿತ ಐಟಿ-ಬಿಟಿ ಖಾತೆ ಸಚಿವ ಸ್ಥಾನವನ್ನು ಕೊಡಿಸುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಅವರ ಕಾರ್ಯವೈಖರಿ ಮತ್ತು ರಾಜಕೀಯ ಹಿನ್ನೆಲೆಯನ್ನು ಪ್ರಶ್ನಿಸಿದ್ದಾರೆ. ಅನಗತ್ಯವಾಗಿ ಸಂಘ ಪರಿವಾರವನ್ನು ವಿವಾದಗಳಿಗೆ ಎಳೆದು ತರುತ್ತಿರುವ ರಾಜ್ಯ ಸರ್ಕಾರದ ಧೋರಣೆ ಮತ್ತು ಸಚಿವ ಪ್ರಿಯಾಂಕ ಖರ್ಗೆ ಅವರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಅವರು ಟೀಕೆಗಳನ್ನು ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು, 'ಶೈಕ್ಷಣಿಕ ಅರ್ಹತೆಯನ್ನು ಮೀರಿ ಐಟಿ ಮತ್ತು ಬಿಟಿ ಯಂತಹ ಮಹತ್ವದ ಖಾತೆಯನ್ನು ಪ್ರಿಯಾಂಕ ಖರ್ಗೆ ಅವರಿಗೆ ನೀಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಿಯಾಂಕ ಖರ್ಗೆ ಅವರು ಮಾಡಿದ ಒಂದೇ ಒಂದು ಸಾಧನೆಯನ್ನು ಹೇಳಲಿ. 'ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೆಚ್ಚಿಸಲು ಎರಡು ಖಾತೆಗಳನ್ನು ಪಡೆದಿದ್ದಾರೆ. ಆದರೆ, ಪ್ರಿಯಾಂಕ ಖರ್ಗೆ ಅವರು ಪಿಯುಸಿಯಲ್ಲಿ ಫೇಲ್ ಆದರೂ ಸಹ, ಅವರ ತಂದೆ ಉತ್ತಮ ಆಸ್ತಿ ಮಾಡಿ ಜೊತೆಗೆ ಒಳ್ಳೆಯ ಸಚಿವ ಸ್ಥಾನವನ್ನು ಕೊಡಿಸಿದ್ದಾರೆ' ಎಂದು ವ್ಯಂಗ್ಯವಾಡಿದರು.
'ಎಐ ಹಬ್' ಆಂಧ್ರಕ್ಕೆ ಹೋದದ್ದೇಕೆ?
ಬೆಂಗಳೂರಿಗೆ ಬರಬೇಕಿದ್ದ ಪ್ರಮುಖ ಕಂಪನಿಗಳು ಮತ್ತು ಎಐ ಹಬ್ ಯೋಜನೆ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಬಗ್ಗೆ ಪ್ರತಾಪ್ ಸಿಂಹ ತೀಕ್ಷ್ಣ ಪ್ರಶ್ನೆಗಳನ್ನು ಎತ್ತಿದರು. 'ಬೆಂಗಳೂರಿಗೆ ಬರಬೇಕಾದ ಕಂಪನಿಗಳು ಆಂಧ್ರಕ್ಕೆ ಏಕೆ ಹೋದವು? ಆ ಕಂಪನಿಗಳ ಬಳಿ ಪ್ರಿಯಾಂಕ ಖರ್ಗೆ ಅವರು ಖರ್ಚಿಗೆ ಹಣ ಏನಾದರೂ ಕೇಳಿದ್ರಾ? ಮೈಸೂರು ಅಥವಾ ಕಲಬುರ್ಗಿ ಜಿಲ್ಲೆಯಲ್ಲೇ ಎಐ ಹಬ್ ಸ್ಥಾಪನೆಗೆ ಉಚಿತವಾಗಿ ಭೂಮಿ ನೀಡಬಹುದಿತ್ತು' ಎಂದು ಆರೋಪಿಸಿದರು. ಪಿಯುಸಿ ಫೇಲಾದ ಮಗನಿಗೆ ಐಟಿ ಖಾತೆ ಕೊಟ್ಟು ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ಭೀಮ ಆರ್ಮಿ ಕಟ್ಟುವ ನೈತಿಕತೆ ಇಲ್ಲ:
ಪ್ರಿಯಾಂಕ ಖರ್ಗೆ ಅವರು 'ಭೀಮ ಆರ್ಮಿ' ಕುರಿತು ನೀಡಿದ ಹೇಳಿಕೆಗಳ ಬಗ್ಗೆ ಟೀಕಿಸಿ, 'ಭೀಮ ಆರ್ಮಿ ಕಟ್ಟುವ ಅರ್ಹತೆ ಪ್ರಿಯಾಂಕ ಖರ್ಗೆ ಅವರಿಗೆ ಇದೆಯೇ? ಮೊದಲು ಕಾಂಗ್ರೆಸ್‌ಗೆ ಆ ಅರ್ಹತೆ ಇದೆಯೇ ಎಂಬುದನ್ನು ನೋಡಿಕೊಳ್ಳಲಿ. ಅಂಬೇಡ್ಕರ್ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‌ಗೆ ಭೀಮ ಆರ್ಮಿ ಕಟ್ಟುವ ನೈತಿಕತೆ ಎಲ್ಲಿಂದ ಬಂತು?. ಅಲ್ಲದೆ, 'ನೆಹರು ಅವರ ಮರಿ ಮಗಳ ಹೆಸರು ಇಟ್ಟುಕೊಂಡ ಪ್ರಿಯಾಂಕ ಖರ್ಗೆಗೆ ಭೀಮ ಆರ್ಮಿ ಕಟ್ಟುವ ನೈತಿಕತೆ ಇದೆಯೇ? ಎಂದು ಕಿಡಿಕಾರಿದರು.
ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ 'ನವೆಂಬರ್ ಕ್ರಾಂತಿ'ಯ ಒತ್ತಡವಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕುರ್ಚಿ ಸಿಗುತ್ತದೆಯೋ ಇಲ್ಲವೋ ಎಂಬ ತಳಮಳವಿದೆ. ಹೀಗಾಗಿ ಈ ಸರ್ಕಾರದಲ್ಲಿ ಹೇಳುವವರು-ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.
