ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ ಒಳಮೀಸಲಾತಿ ಆದೇಶ ಸರಿ ಇಲ್ಲ ಎಂದು ಈಗಾಗಲೇ ಅಲೆಮಾರಿ ಜನಾಂಗ ಹೋರಾಡುತ್ತಿದೆ. ಬೋವಿ, ಲಂಬಾಣಿ, ಮಾದಿಗ, ಛಲವಾದಿಗಳು ಸೇರಿ ಇನ್ನುಳಿದ ಜನಾಂಗಗಳೂ ಅಸಮಾಧಾನಗೊಂಡಿದ್ದಾರೆ.
ಬೆಂಗಳೂರು (ಅ.07): ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರ ಜಾರಿ ಮಾಡಿದ ಒಳಮೀಸಲಾತಿ ಆದೇಶ ಸರಿ ಇಲ್ಲ ಎಂಬ ಆಕ್ರೋಶದಿಂದ ಹಲವು ಸಮುದಾಯಗಳು ಹೋರಾಟಕ್ಕಿಳಿದಿವೆ. ಈ ಸಂದರ್ಭ ಸಿದ್ದರಾಮಯ್ಯ ಸರ್ಕಾರಕ್ಕೆ ಮಾದಿಗರ ಮಹಾಸಭಾದಿಂದ ಅಭಿನಂದನೆ ಸಲ್ಲಿಸುವುದು ಯಾವ ಪುರುಷಾರ್ಥಕ್ಕಾಗಿ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಖಾರವಾಗಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ ಒಳಮೀಸಲಾತಿ ಆದೇಶ ಸರಿ ಇಲ್ಲ ಎಂದು ಈಗಾಗಲೇ ಅಲೆಮಾರಿ ಜನಾಂಗ ಹೋರಾಡುತ್ತಿದೆ. ಬೋವಿ, ಲಂಬಾಣಿ, ಮಾದಿಗ, ಛಲವಾದಿಗಳು ಸೇರಿ ಇನ್ನುಳಿದ ಜನಾಂಗಗಳೂ ಅಸಮಾಧಾನಗೊಂಡಿದ್ದಾರೆ. ಅನೇಕರು ನ್ಯಾಯಾಲಯಕ್ಕೂ ಮೊರೆ ಹೋಗಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಕಾಲವಲ್ಲ. ಮಾಡಿರುವ ತಪ್ಪು ಸರಿಪಡಿಸಲು ಒತ್ತಡ ಹಾಕುವ ಸಮಯ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ನೇಮಕ ಮಾಡಿರುವ ನ್ಯಾ.ನಾಗಮೋಹನ್ ದಾಸ್ ಸಮಿತಿ ಒಳಮೀಸಲಿಗೆ ಐದು ಗುಂಪು ಮಾಡಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದ ಮಾಧುಸ್ವಾಮಿ ಸಮಿತಿ ನಾಲ್ಕು ಗುಂಪು ಮಾಡಿದೆ. ಅದೆಲ್ಲವನ್ನೂ ಬದಿಗೊತ್ತಿ ಪ್ರಬಲರ ಒತ್ತಾಯಕ್ಕೆ ಮಣಿದು ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದನ್ನು ನಾವು ಎಂದೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹೋರಾಟ ಮುಂದುವರೆಸುತ್ತೇವೆ
ಈ ವಿಚಾರವಾಗಿ ನಾವು ಮೊದಲಿಂದಲೂ ವಿರೋಧ, ಹೋರಾಟ ಮುಂದುವರೆಸಿಕೊಂಡು ಬಂದಿದ್ದೇವೆ. ಎಲ್ಲಿಯವರೆಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲವೋ ಅಲ್ಲಿಯವರೆಗೂ ಹೋರಾಟ ಮುಂದುವರೆಸುತ್ತೇವೆ. ಸರ್ಕಾರವು ನ್ಯಾ.ನಾಗಮೋಹನ್ ದಾಸ್ ಅಥವಾ ಮಾಧುಸ್ವಾಮಿ ಸಮಿತಿ ವರದಿ ಒಪ್ಪಲಿ. ಅದನ್ನು ಒಪ್ಪುವವರೆಗೂ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಇದನ್ನು ನಾನು ಸ್ಪಷ್ಟಪಡಿಸಲು ಮಾಧ್ಯಮದ ಎದುರು ಬಂದಿದ್ದೇನೆ. ದಯವಿಟ್ಟು ಎಲ್ಲರೂ ಸಹಕರಿಸಿ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ವರದಿ ಒಪ್ಪಲು ಸರ್ಕಾರದ ಮೇಲೆ ಒತ್ತಡ ಹೇರಲು ವಿನಂತಿಸುತ್ತೇನೆ ಎಂದು ಕಾರಜೋಳ ಹೇಳಿದ್ದಾರೆ.
