ವರ್ತೂರು ಪ್ರಕಾಶ್ ಒಬ್ಬ ಸುಳ್ಳುಗಾರ. ಸುಳ್ಳಿಗೆ ಯಾರಾದರೂ ಒನರ್ ಇದ್ದರೆ ಅದು ವರ್ತೂರು ಪ್ರಕಾಶ್ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ (ಆ.13): ಸುಳ್ಳಿಗೆ ಯಾರಾದರೂ ಒನರ್ ಇದ್ದರೆ ಅದು ಮಾಜಿ ಸಚಿವ ವರ್ತೂರು ಪ್ರಕಾಶ್ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಸಂಜಯ್ ನಗರದಲ್ಲಿ ನನ್ನದೇ ಮನೆ ಎಂದು ಭರ್ಜರಿ ಗೃಹ ಪ್ರವೇಶ ಮಾಡಿದ್ರು. ಆದ್ರೆ ಐದು ವರ್ಷ ಮನೆ ಬಾಡಿಗೆ ಕೊಡದೆ ಮನೆ ಓನರ್ ಗೆ ಬೆದರಿಕೆ ಹಾಕಿದ್ರು. ಮನೆ ಮಾಲೀಕ ಕೋರ್ಟನಲ್ಲಿ ಕೇಸ್ ಸಹ ಹಾಕಿದ್ರು. ಕೋರ್ಟ್ ಸೂಚನೆಯಂತೆ ವರ್ತೂರು ಪ್ರಕಾಶ್ ನ ಮನೆಯಿಂದ ಹೊರ ಹಾಕಿದ್ದಾರೆ ಎಂದರು.
ಇದರ ಬಗ್ಗೆ ಎಲ್ಲಾ ದಾಖಲೆಗಳನ್ನು ಬೇಕಾದ್ರೆ ನಾನು ನೀಡುತ್ತೇನೆ. ವರ್ತೂರು ಪ್ರಕಾಶ್ ಒಬ್ಬ ಸುಳ್ಳುಗಾರ. ಸುಳ್ಳಿಗೆ ಯಾರಾದರೂ ಒನರ್ ಇದ್ದರೆ, ಅದಕ್ಕೆ ಚೇರ್ ಮನ್ ಇದ್ದರೆ ಅದು ವರ್ತೂರು ಪ್ರಕಾಶ್. ಮನೆ ಬಾಡಿಗೆ ಪಡೆದು ಒನರ್ ನೇ ಮನೆಯಿಂದ ಆಚೆ ಹಾಕಿದ್ದಾರೆಂದರೆ ಯಾವ ಮಟ್ಟಕ್ಕೆ ಇದೆ ಎಂದು ಯೋಚಿಸಿ ಎಂದು ವೇಮಗಲ್- ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಚಾರದಲ್ಲಿ ಕೊತ್ತೂರು ಮಂಜುನಾಥ್ ಹೇಳಿದರು.
ಸರ್ಕಾರದಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಹಳೆ ಕಟ್ಟಡ ತೆರವುಗೊಳಿಸಿ ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಸುಮಾರು 22.50 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಹಾಗೂ ಸ್ಮರಣೆ ಸಂಚಿಕೆ ಬಿಡುಗಡೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರೊಂದಿಗಿನ ಮಾತುಕತೆಯ ಫಲವಾಗಿ ಮುಂದಿನ ದಿನಗಳಲ್ಲಿ ಎರಡೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ 40 ಕೋಟಿ ರು. ಹಾಗೂ ಕಾನೂನು ಕಾಲೇಜಿಗೆ 4.50 ಕೋಟಿ ರು. ಬಿಡುಗಡೆಗೂ ಒಪ್ಪಿಗೆ ನೀಡಿದ್ದು, ಈ ವರ್ಷದಿಂದಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯ ಮಣ್ಣಿನ ಗುಣದಿಂದಲೇ ಅನೇಕ ಬುದ್ಧಿವಂತರು ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಜಿಲ್ಲೆಯಿಂದ ಕೆಎಎಸ್, ಐಎಎಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಯ್ಕೆ ಆಗುತ್ತಿರುವುದು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಧಕರಾಗಿ ಹುಟ್ಟಿಕೊಂಡಿರುವುದು ಈ ಮಣ್ಣಿನ ಗುಣವನ್ನು ತೋರಿಸುತ್ತದೆ ಎಂದು ತಿಳಿಸಿದರು.
