ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ, ನನಗೂ ಸೀನಿಯರಿಟಿ ಇದೆ. ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನನ್ನನ್ನೂ ಕನ್ಸಿಡರ್ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು.

ಮಾಗಡಿ (ಅ.14): ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ, ನನಗೂ ಸೀನಿಯರಿಟಿ ಇದೆ. ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನನ್ನನ್ನೂ ಕನ್ಸಿಡರ್ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. ನಂತರ ನವೆಂಬರ್ ಕ್ರಾಂತಿ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕ್ರಾಂತಿ ಆಗೋದು ಕಾಂಗ್ರೆಸ್ ನಲ್ಲಿ ಅಲ್ಲ ಬಿಜೆಪಿಯಲ್ಲಿ. ಆರ್.ಅಶೋಕ್ ವಿಪಕ್ಷ ನಾಯಕ ಸ್ಥಾನಕ್ಕೆ ಶೂಟ್ ಆಗಲ್ಲ. ಅವರು ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಅವರ ಹೈಕಮಾಂಡ್‌ಗೆ ವರದಿ ಹೋಗಿದೆ. ರಾಜ್ಯ ಬಿಜೆಪಿ ಅಶೋಕ್ ಮೇಲೆ ದೂರು‌ ಕೊಟ್ಟಿದೆ. ಬಹುಶಃ ನವೆಂಬರ್ ನಲ್ಲಿ ಅವರ ಬದಲಾವಣೆ ಮಾಡಬಹುದು. ಅಶೋಕ್ ರವರನ್ನ ತೆಗೆಯೋದೆ ನವೆಂಬರ್ ಕ್ರಾಂತಿ ಎಂದು ಬಿಜೆಪಿ ನಾಯಕರಿಗೆ ಹೆಚ್.ಸಿ.ಬಾಲಕೃಷ್ಣ ಟಾಂಗ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ ಡಿನ್ನರ್ ಪಾರ್ಟಿ ವಿಚಾರವಾಗಿ, ಡಿನ್ನರ್ ಪಾರ್ಟಿ ಅಂದ್ರೆ ಸಾಮಾನ್ಯವಾಗಿ ಸಚಿವರಿಗೆ ಊಟ ಹಾಕೋದು ಸರ್ವೇ ಸಾಮಾನ್ಯ. ಊಟಕ್ಕೆ ಸೇರಿದಾಗ ರಾಜಕೀಯ ಚರ್ಚೆ, ಅಭಿವೃದ್ಧಿ ಚರ್ಚೆಗಳು ಆಗಿರಬಹುದು. ಈಗ ಎರಡುವರೆ ವರ್ಷ ತುಂಬಿದೆ. ಇನ್ನೂ ಎರಡುವರೆ ವರ್ಷದಲ್ಲಿ ಯಾವರೀತಿ ಕಾರ್ಯವೈಖರಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಬಹುದು. ಅದನ್ನ ಬಿಟ್ಟರೇ ಬೇರೆ ರೀತಿಯ ಚರ್ಚೆ ಆಗಿಲ್ಲ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಅವಕಾಶ ನೀಡುವ ವಿಚಾರವಾಗಿ, ಡಿಸಿಎಂ ಅವರಿಗೂ ನ್ಯಾಚುರಲ್ ಆಗಿ ಅವಕಾಶ ಸಿಗಬೇಕು. ಪಕ್ಷ ಅಧಿಕಾರಕ್ಕೆ ತರಲು ಅವರದ್ದೂ ಶ್ರಮ ಇದೆ. ಅವರಿಗೂ ಒಂದು ಅವಕಾಶ ಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮುಖ್ಯ. ಎಲ್ಲಾ ವಿಚಾರವೂ ಹೈಕಮಾಂಡ್‌ಗೆ ಗೊತ್ತಿದೆ.

ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ಮಾಡಬೇಕು ಅಂತ ಹೈಕಮಾಂಡ್‌ಗೆ ಗೊತ್ತಿದೆ. ಪರಮೇಶ್ವರ್ ಸಿಎಂ ಸ್ಥಾನದ ಆಕಾಂಕ್ಷಿ ಆದ್ರೆ ತಪ್ಪೇನಿಲ್ಲ.! ಅವರೂ ಕೂಡಾ ಸೀನಿಯರ್ ಮೆಂಬರ್. ಡಿಸಿಎಂ ಆಗಿ, ಪಕ್ಷದ ಅಧ್ಯಕ್ಷರಾಗಿ, ಗೃಹ ಸಚಿವರಾಗಿ ಕೆಲಸ‌ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ತಲೆಬಾಗುತ್ತೇವೆ. ಸಂಪುಟದಿಂದ ಹಿರಿಯ ಸಚಿವರಿಗೆ ಕೋಕ್ ವಿಚಾರವಾಗಿ, ಕೋಕ್ ಕೊಡ್ತಾರೆ ಅನ್ನೋದನ್ನ ಹೇಳಬೇಡಿ. ಬೇರೆಯವರಿಗೆ ಅವಕಾಶ ಕೊಡಬೇಕು ಅಂದ್ರೆ ಬದಲಾವಣೆ ಆಗಬಹುದು. ಸಚಿವ ಸ್ಥಾನ ಇರೋದೆ 34 ಅದನ್ನ ಎಲ್ಲರಿಗೂ ಕೊಡೋಕಾಗಲ್ಲ. ಎರಡೂವರೆ ವರ್ಷ ಯಾರು ಉತ್ತಮ ಕೆಲಸ ಮಾಡಿದ್ದಾರೆ ಅವರಿಗೆ ಪಕ್ಷದ ಜವಾಬ್ದಾರಿ ಕೊಡ್ತಾರೆ. ಚುನಾವಣಾ ದೃಷ್ಟಿಯಿಂದ ಹೊಸಬರಿಗೆ ಮಂತ್ರಿ ಸ್ಥಾನದ ಅವಕಾಶ ಕೊಡಬಹುದು ಎಂದು ತಿಳಿಸಿದರು.

ಆರ್‌ಎಸ್ಎಸ್ ಚಟುವಟಿಕೆ ಮೇಲೆ ನಿಯಂತ್ರಣ ವಿಚಾರವಾಗಿ, ದೇಶದಲ್ಲಿ ಯಾವುದೇ ಸಂಘಟನೆ ಅಸ್ತಿತ್ವದಲ್ಲಿ ಇರಬೇಕು ಅಂದ್ರೆ ನೋಂದಣಿ ಮಾಡಬೇಕು. ಆರ್‌ಎಸ್ಎಸ್ ನವರು ಯಾವ ಕಾರಣಕ್ಕೆ ನೋಂದಣಿ ಮಾಡಿಲ್ಲ ಅನ್ನೋದು ಗೊತ್ತಿಲ್ಲ. ಚಟುವಟಿಕೆ ಸಂದರ್ಭದಲ್ಲಿ ಏನಾದ್ರೂ ಅನಾಹುತ ಆದ್ರೆ‌ ಯಾರು ಹೊಣೆ. ಆಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಬಹುದು. ಮೊನ್ನೆ ಕೇರಳದಲ್ಲಿ ಯುವನ ಮೇಲೆ ಆರ್‌ಎಸ್ಎಸ್ ನವರು ಲೈಂಗಿಕ ಕಿರುಕಳ ನೀಡವ್ರೆ. ಕೇರಳದಲ್ಲಿ ಸಲಿಂಗಕಾಮಿಗಳು ಆರ್‌ಎಸ್ಎಸ್ ನಲ್ಲಿದ್ದಾರೆ ಅಂತ ವರದಿ ಆಗಿದೆ. ಇಂತಹ ಸಂದರ್ಭದಲ್ಲಿ ಕ್ರಮ ಆಗಬೇಕು. ಅದಕ್ಕಾಗಿ ಸಂಘಟನೆ ನೋಂದಣಿ‌ ಮಾಡಿಸಿಕೊಳ್ಳಬೇಕು. ಮೊದಲು ನೋಂದಣಿ ಮಾಡಿಸಿಕೊಳ್ಳಿ ಅಂತ ಆರ್‌ಎಸ್ಎಸ್‌ಗೆ ಮನವಿ ಮಾಡ್ತೀವಿ ಎಂದರು.

ಮುನಿರತ್ನ ಮಾಡಬಾರದ್ದನ್ನ ಮಾಡವ್ನೆ

ಎಚ್ಡಿಕೆ ಕುಟುಂಬದ ಆರೋಗ್ಯ ಕೆಡಲು ಡಿಕೆಶಿ ವಾಮಾಚಾರ ಮಾಡ್ಸಿದ್ದಾರೆ ಎಂಬ ಮುನಿರತ್ನ ಹೇಳಿಕೆ ವಿಚಾರವಾಗಿ, ಮುನಿರತ್ನ ತನ್ನ ಬೇಳೆ ಬೇಯಿಸಿಕೊಳ್ಳಲು ಹೀಗೆ ಹೇಳ್ತಾರೆ. ಮುನಿರತ್ನ ಹೇಳಿಕೆಗೆ ಮಹತ್ವ ಕೊಡಬೇಡಿ. ಅಷ್ಟೊಂದು ಕೀಳು ಮಟ್ಟದ ರಾಜಕೀಯಕ್ಕೆ ಡಿಕೆಶಿ ಕುಟುಂಬ ಇಳಿದಿಲ್ಲ. ಎಚ್ಡಿಕೆ ಆರೋಗ್ಯ ಹಾಳಾಗಲು ಏನು ಕಾರಣ ಅಂತ ಕುಮಾರಸ್ವಾಮಿ ಅವರನ್ನೇ ಕೇಳಿ. ಏಡ್ಸ್ ಇಂಜೆಕ್ಷನ್ ಕೊಡ್ತಿದ್ದವನು ಯಾರು. ಅವರ ನಾಯಕ ಅಶೋಕ್‌ಗೆ ಇಂಜೆಕ್ಷನ್ ಕೊಡಿಸೋಕೆ ಹೋಗಿದ್ದ. ಇಂಜೆಕ್ಷನ್ ಕೊಡೋದು, ಬ್ಲೂಫಿಲಂ ಮಾಡೋದು, ವಾಮಾಚಾರ ಮಾಡಿಸೋದು ಮುನಿರತ್ನ. ಮುನಿರತ್ನ ಮಾಡಬಾರದ್ದನ್ನ ಮಾಡವ್ನೆ. ಅವನಿಗೆ, ಅವನ ಮಾತಿಗೆ ಅಷ್ಟೊಂದು ಆದ್ಯತೆ ಕೊಡಬೇಡಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.