ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ನಿರ್ವಿವಾದವಾಗಿ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಖವಿದ್ದಂತೆ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರೂ ನಾವು ಒಪ್ಪುವುದಿಲ್ಲ ಎಂದು ಸಚಿವ ಸಂತೋಷ್ ಲಾಡ್ ಪುನರುಚ್ಚರಿಸಿದ್ದಾರೆ.
ಬೆಂಗಳೂರು (ಅ.30): ರಾಜ್ಯದಲ್ಲಿ ನಮಗೆ ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ನಿರ್ವಿವಾದವಾಗಿ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಖವಿದ್ದಂತೆ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರೂ ನಾವು ಒಪ್ಪುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜಕಾರಣದಿಂದ ನಿವೃತ್ತಿ ಆಗಬಾರದು.
ರಾಹುಲ್‌ಗಾಂಧಿ ಕಾಂಗ್ರೆಸ್‌ಗೆ ಅನಿವಾರ್ಯವಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ. ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಸಕ್ರಿಯರಾಗಿರಬೇಕು. ಬಹಳ ಮುಖ್ಯವಾಗಿ ಅವರ ನಾಯಕತ್ವ ಬೇಕಾಗಿದೆ ಎಂದು ಹೇಳಿದರು. ಸಿದ್ದರಾಮಯ್ಯ ಜನಪ್ರಿಯ ನಾಯಕರು. ಅವರ ವರ್ಚಸ್ಸು ಕಾಂಗ್ರೆಸ್‌ಗೆ ಬಲ ನೀಡಲಿದೆ. ನಾಯಕತ್ವ ಬದಲಾವಣೆ ಸನ್ನಿವೇಶ, ಅನಿವಾರ್ಯತೆ ಇಲ್ಲ. ಅದೆಲ್ಲವೂ ಹೈಕಮಾಂಡ್‌ನಿಂದ ನಿರ್ಧಾರ ಆಗಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರಕ್ಕೆ ವರದಿ
ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುತ್ತಿರುವ ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಲ್ ಆ್ಯಂಡ್ ಟಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಲಾಡ್, ಕುಡಿಯುವ ನೀರಿನ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅನೇಕ ಸಭೆಗಳನ್ನು ಜರುಗಿಸಿ, ನಿರ್ದೇಶನ ನೀಡಲಾಗಿದೆ. ಸೂಚನೆ ಪಾಲಿಸದೇ ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡುತ್ತಿರುವದಕ್ಕೆ ದಂಡ ಸಹ ವಿಧಿಸಲಾಗಿದೆ. ಆದರೂ ಕಂಪನಿ ಕಾರ್ಯವೈಖರಿಯಲ್ಲಿ ಬದಲಾವಣೆ, ಸುಧಾರಣೆ ಕಾಣುತ್ತಿಲ್ಲ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮುಂದಿನ 15 ದಿನಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಜರುಗಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿದ ಸಚಿವರು, ಬೆಳೆ ಹಾನಿಯಲ್ಲಿ ರೈತರಿಗೆ ಎಷ್ಟು ಹಣ ಬಂದಿದೆ ಎಂಬುದನ್ನು ರೈತ ಸಂಪರ್ಕ ಕೇಂದ್ರ, ಗ್ರಾಪಂಗಳ ಸೂಚನಾ ಫಲಕದಲ್ಲಿ ಮಾಹಿತಿ ಅಳವಡಿಸಬೇಕು. ಯಾವ ರೈತರಿಗೆ ಪರಿಹಾರ ಜಮೆ ಆಗಿಲ್ಲ ಅವರಿಗೆ ಸೂಕ್ತ ವಿವರಣೆ, ತಿಳಿವಳಿಕೆ ನೀಡಬೇಕು. ಕಲಘಟಗಿ, ಧಾರವಾಡ, ಹುಬ್ಬಳ್ಳಿ ಭಾಗದ ರೈತರು ಪರ್ಯಾಯ ಬೆಳೆಯಾಗಿ ಅಡಕೆ ಬೆಳೆಯನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಬೆಳೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ, ಅಡಕೆ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವಂತೆ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಕ್ರಮವಹಿಸಬೇಕು ಎಂದು ಸೂಚಿಸಿದರು.
