ಮುಖ್ಯಮಂತ್ರಿ ಆಗಲು ಹೈಕಮಾಂಡ್‌ ಬೆಂಬಲ ಬೇಕು ಅಥವಾ ಶಾಸಕರ ಬೆಂಬಲ ಬೇಕೆನ್ನುವ ಹೇಳಿಕೆ ಸೇರಿ ಅಧಿಕಾರ ಹಂಚಿಕೆ ಮತ್ತಿತರ ಹೇಳಿಕೆಗಳಿಂದ ಪಕ್ಷಕ್ಕೆ ತೀವ್ರ ಹಾನಿ ಆಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರು (ಅ.15): ‘ಮುಖ್ಯಮಂತ್ರಿ ಆಗಲು ಹೈಕಮಾಂಡ್‌ ಬೆಂಬಲ ಬೇಕು ಅಥವಾ ಶಾಸಕರ ಬೆಂಬಲ ಬೇಕೆನ್ನುವ ಹೇಳಿಕೆ ಸೇರಿ ಅಧಿಕಾರ ಹಂಚಿಕೆ ಮತ್ತಿತರ ಹೇಳಿಕೆಗಳಿಂದ ಪಕ್ಷಕ್ಕೆ ತೀವ್ರ ಹಾನಿ ಆಗುತ್ತದೆ. ನಮ್ಮ ನಾಯಕರಿಗೆ ಇದು ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ಇದಕ್ಕೆ ಹೈಕಮಾಂಡ್ ಬ್ರೇಕ್‌ ಹಾಕಬೇಕು, ನಾವೂ ಕೂಡ ಬ್ರೇಕ್‌ ಹಾಕಿಕೊಳ್ಳಬೇಕು’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಪಕ್ಷದಲ್ಲಿನ ಅಧಿಕಾರ ಹಂಚಿಕೆ ಹೇಳಿಕೆಗಳ ಬಗ್ಗೆ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಣದ ನಾಯಕರ ಹೇಳಿಕೆಗಳ ಬಗ್ಗೆ ರಾಮಲಿಂಗಾರೆಡ್ಡಿ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕೆ 138 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ಜನ ಅಧಿಕಾರ ನೀಡಿದ್ದಾರೆ. ಪ್ರಣಾಳಿಕೆಯಲ್ಲಿನ 5 ಗ್ಯಾರಂಟಿ ಈಡೇರಿಸಿದ್ದೇವೆ. ಉತ್ತಮ ಆಡಳಿತ ನೀಡುತ್ತಿದ್ದೇವೆ. ಹೀಗಿರುವಾಗ ಶುರುವಿನಿಂದಲೇ 2 ವರ್ಷ ಅವರು, 2 ವರ್ಷ ಇವರು ಮುಖ್ಯಮಂತ್ರಿ ಎನ್ನುವುದು ಸೇರಿದಂತೆ ಅನಗತ್ಯ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ತೀವ್ರ ಹಾನಿ ಉಂಟು ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಮೂರು ಜನ ಉಪ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಯಾಕೆ ಹೇಳಬೇಕು? ಇದಲ್ಲದೆ ಕೆ.ಎನ್‌. ರಾಜಣ್ಣ ಅವರ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ, ನವೆಂಬರ್‌ ಕ್ರಾಂತಿ ಹೇಳಿಕೆ. ಇದೀಗ ಮುಖ್ಯಮಂತ್ರಿ ಆಯ್ಕೆ ಅಂತಿಮ ತೀರ್ಮಾನ ಹೈಕಮಾಂಡ್‌ (ಡಿ.ಕೆ. ಶಿವಕುಮಾರ್ ಹೇಳಿದ್ದು) ಮಾಡುತ್ತದೆ ಎನ್ನುವುದು. ಅದಕ್ಕೆ ಪ್ರತಿಯಾಗಿ ಶಾಸಕರ ಸಂಖ್ಯೆಯೇ (ಸಿದ್ದರಾಮಯ್ಯ ಹೇಳಿದ್ದು) ಅಂತಿಮ ಎನ್ನುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್‌ ಅವರ ಪರ ರಾಮನಗರ, ಕುಣಿಗಲ್‌, ಚನ್ನಗಿರಿ, ಮಾಗಡಿ ಶಾಸಕರು ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರ ಪರ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ. ಜತೆಗೆ ಆರ್‌.ವಿ. ದೇಶಪಾಂಡೆ, ರಾಯರೆಡ್ಡಿ, ಬಿ.ಆರ್‌. ಪಾಟೀಲ್‌ ಹೇಳಿಕೆಗಳೆಲ್ಲವೂ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದರು. ಇವುಗಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬುದನ್ನು ನಮ್ಮ ನಾಯಕರು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಹೈಕಮಾಂಡ್‌ ಅನೇಕ ಸಲ ಹೇಳಿದೆ. ಏಳೆಂಟು ಸಲ ಶಾಸಕರಾಗಿ ಸಚಿವರಾದವರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಇದು ನಮ್ಮ ದುರಾದೃಷ್ಟ ಎಂದರು.

ಮುಂದಿನ ಬಾರಿಗೂ ನಮ್ಮದೇ ಸರ್ಕಾರ: ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ಯತ್ನಾಳ್‌ ಸೇರಿ ಅವರಲ್ಲೇ ಕಿತ್ತಾಟ ನಡೆಯುತ್ತಿದ್ದು, ನಾಯಕತ್ವವೇ ಇಲ್ಲದಂತಾಗಿದೆ. ಹೀಗಾಗಿ ನಮ್ಮಲ್ಲಿ ಏನೇ ಗೊಂದಲ ಇದ್ದರೂ ಮುಂದಿನ ಬಾರಿಗೂ ನಾವೇ ಗೆಲ್ಲುತ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಆರ್‌ಎಸ್‌ಎಸ್‌ ನಿಷೇಧಿಸಿ ಎಂದು ಪ್ರಿಯಾಂಕ್‌ ಹೇಳಿಲ್ಲ

ಆರೆಸ್ಸೆಸ್‌ ನಿಷೇಧಿಸಿ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಬೇಡ. ಅನುಮತಿ ಪಡೆದು ಕಾರ್ಯಕ್ರಮ ಮಾಡಲಿ ಅಂತ ಹೇಳಿದ್ದಾರಷ್ಟೇ ಎಂದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.