ಕಳೆದೆರಡು ದಿನಗಳಿಂದ ನನಗೆ ಹಾಗೂ ನನ್ನ ಕುಟುಂಬದಕ್ಕೆ ಬೆದರಿಕೆ ಹಾಗೂ ಅತ್ಯಂತ ಕೀಳು ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಿದ್ದು, ಇದರಿಂದ ಯಾವುದೇ ಕಾರಣಕ್ಕೂ ವಿಚಲಿತನಾಗುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು (ಅ.15): ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ಪ್ರಶ್ನಿಸುವ, ತಡೆಯುವ ಧೈರ್ಯ ಮಾಡಿದ್ದರಿಂದ ಕಳೆದೆರಡು ದಿನಗಳಿಂದ ನನಗೆ ಹಾಗೂ ನನ್ನ ಕುಟುಂಬದಕ್ಕೆ ಬೆದರಿಕೆ ಹಾಗೂ ಅತ್ಯಂತ ಕೀಳು ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಿದ್ದು, ಇದರಿಂದ ಯಾವುದೇ ಕಾರಣಕ್ಕೂ ವಿಚಲಿತನಾಗುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಮಾಹಿತಿ ಹಂಚಿಕೊಂಡು ಹಾಗೂ ಸುದ್ದಿಗಾರರ ಜತೆ ಮಾತನಾಡಿ, ಇಂತಹ ಬೆದರಿಕೆ ಕರೆಗಳಿಂದ ನನಗೆ ಅಚ್ಚರಿ ಆಗಿಲ್ಲ. ಮಹಾತ್ಮಾಗಾಂಧೀಜಿ ಅಥವಾ ಅಂಬೇಡ್ಕರ್‌ ಅವರಂಥ ಮಹಾನ್‌ ನಾಯಕರನ್ನೇ ಆರ್‌ಎಸ್‌ಎಸ್‌ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ?

ಬೆದರಿಕೆ ಮತ್ತು ವೈಯಕ್ತಿಕ ನಿಂದನೆಗಳಿಂದ ನನ್ನ ಬಾಯ್ಮುಚ್ಚಿಸಬಹುದು ಎಂದು ಅವರು ಭಾವಿಸಿದ್ದರೆ ಅದು ಅವರ ಕಲ್ಪನೆ ಮಾತ್ರ, ಇದಿನ್ನೂ ಆರಂಭವಷ್ಟೇ ಎಂದಿದ್ದಾರೆ. ಇದು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ತತ್ವಗಳ ಮೇಲೆ ಸಮಾಜ ನಿರ್ಮಿಸುವ ಕಾಲ, ಸಮಾನತೆ ವಿವೇಚನೆ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜ ಹಾಗೂ ರಾಷ್ಟ್ರವನ್ನು ಅತ್ಯಂತ ಅಪಾಯಕಾರಿ ವೈರಸ್‌ ಗಳಿಂದ ಶುದ್ಧೀಕರಿಸುವ ಸಮಯ ಎಂದು ಪ್ರತಿಕ್ರಿಯಿಸಿದ್ದಾರೆ. ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದಾಗ ಬೆದರಿಕೆ ಕರೆಗಳು ಬರುತ್ತವೆ. ಆದರೆ ಅದಕ್ಕೆಲ್ಲ ಹೆದರಲ್ಲ. ವಿರೋಧ ಪಕ್ಷದಲ್ಲಿದ್ದಾಗಲೇ ನಾನು ಹೆದರಲಿಲ್ಲ. ಈಗ ಅಧಿಕಾರದಲ್ಲಿದ್ದಾಗ ಹೆದರುತ್ತೇನೆಯೇ? ಎಂದು ಇದೇ ವೇಳೆ ತಿಳಿಸಿದ್ದಾರೆ.

ಸಿಎಂ ಆಗಲು ‘ಕಪ್ಪ’ ಅಗತ್ಯ ಅಂದಿದ್ರು ಬಿಎಸ್‌ವೈ

‘ದಿವಂಗತ ಅನಂತಕುಮಾರ್ ಅವರ ಕಿವಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಕಪ್ಪ ಕೊಡಬೇಕಾಗುತ್ತದೆ. ಸುಮ್ಮನೆ ಆಗಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರು. ಅದರ ವಿಡಿಯೋ ಸಾಕ್ಷ್ಯ ಕೂಡ ಇದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಉತ್ತರ ಕೊಡಲಿ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. ವೀರೇಂದ್ರ ಪಪ್ಪಿ ಅವರು ಸಚಿವ ಸ್ಥಾನ ಪಡೆಯಲು ಅಕ್ರಮ ಹಣ ಗಳಿಕೆ ಮಾಡಿದ್ದರು ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ‘ಬಿ.ವೈ.ವಿಜಯೇಂದ್ರ ಅವರು ಅಮಿತ್ ಶಾ ಅವರಿಗೆ ಬಿಟ್‌ ಕಾಯಿನ್‌ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಆರ್‌.ಅಶೋಕ್‌ ಅವರು ಪ್ರತಿಪಕ್ಷ ನಾಯಕರಾಗಿ ಮುಂದುವರೆಯಲು ನೂರು ಕೋಟಿ ನೀಡಿದ್ದಾರೆ ಎಂದು ನಾನು ಹೇಳುತ್ತೇನೆ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಟ್ಟು ಪುರಾವೆ ನೀಡಲಿ’ ಎಂದು ಆಗ್ರಹಿಸಿದರು. ವಿಜಯೇಂದ್ರ ಅವರು ದುಬೈಗೆ ಹೋಗಿ ಬರುತ್ತಿದ್ದ ಬಗ್ಗೆ ಯತ್ನಾಳ್ ಅವರು ಹೇಳಿದ್ದರು. ನಾವು ಹೇಳಿಲ್ಲ. ವೀರೇಂದ್ರ ಪಪ್ಪಿ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿಯೇ ಇದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದಾಖಲೆ ತರಿಸಿ ಆರೋಪ ಸಾಬೀತುಪಡಿಸಿ’ ಎಂದು ಸವಾಲು ಹಾಕಿದರು.