ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು ಎಂದು ನಾನೆಲ್ಲಿ ಹೇಳಿದ್ದೇನೆ. ಸರ್ಕಾರಿ ಸ್ಥಳಗಳಲ್ಲಿ ಸಂಘ ಪರಿವಾರದವರ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬುದಷ್ಟೇ ನನ್ನ ಆಗ್ರಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಅ.14): ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸಬೇಕು ಎಂದು ನಾನೆಲ್ಲಿ ಹೇಳಿದ್ದೇನೆ. ಸರ್ಕಾರಿ ಸ್ಥಳಗಳಲ್ಲಿ ಸಂಘ ಪರಿವಾರದವರ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬುದಷ್ಟೇ ನನ್ನ ಆಗ್ರಹ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಆರೆಸ್ಸೆಸ್ ನಿಷೇಧಿಸಬೇಕು ಎಂದು ಹೇಳಿಲ್ಲ. ನಿಯಮಾವಳಿ ಪ್ರಕಾರ ಅದು ನೋಂದಣಿಯಾಗದ ಸಂಸ್ಥೆ. ಪೊಲೀಸರ ಅನುಮತಿ ಪಡೆಯದೆ ಸರ್ಕಾರಿ ಹಾಗೂ ಅನುದಾನಿತ ಶಾಲೆ, ಕಾಲೇಜು ಮೈದಾನ, ಸಾರ್ವಜನಿಕ ಮೈದಾನ, ಉದ್ಯಾನ ಮತ್ತಿತರ ಸ್ಥಳಗಳಲ್ಲಿ ಶಾಖೆ, ಬೈಠಕ್‌ಗಳನ್ನು ನಡೆಸುತ್ತಾರೆ. ಅದನ್ನು ನಿಷೇಧಿಸಬೇಕು. ಬೇಕಿದ್ದರೆ ಅವರು ಖಾಸಗಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಿಕೊಳ್ಳಲಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ನೆಹರು, ಇಂದಿರಾ ಗಾಂಧಿ ಅವರಿಂದಲೇ ಆರೆಸ್ಸೆಸ್ ಬ್ಯಾನ್ ಮಾಡಲಾಗಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ, ಸರ್ದಾರ್ ವಲ್ಲಬಬಾಯಿ ಪಟೇಲ್ ಅವರು ಹಿಂದೆ ಆರೆಸ್ಸೆಸ್ ಬ್ಯಾನ್ ಮಾಡಿದ್ದರು. ಹೇಡಿಗಳು ನಂತರ ಪಟೇಲರ ಕಾಲಿಗೆ ಬಿದ್ದು, ನಾವು ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರಧ್ವಜಕ್ಕೆ ಎಂದು ಕ್ಷಮೆ ಕೋರಿದ್ದಕ್ಕೆ ನಿಷೇಧ ತೆರವು ಮಾಡಲಾಗಿತ್ತು. ಪಟೇಲರು ಆರೆಸ್ಸೆಸ್ ತತ್ವ ಎಷ್ಟು ವಿಷಕಾರಿಯಾಗಿದೆ ಎಂದು ನೆಹರು ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಆರೆಸ್ಸೆಸ್‌ನವರು ಇತಿಹಾಸ ಓದಲಿ ಎಂದು ತಿರುಗೇಟು ನೀಡಿದರು.
ಒಂದು ನಿಯಮ ಯಾಕೆ?
ಆರೆಸ್ಸೆಸ್‌ನವರಂತೆ ದಲಿತರ ಸಂಘಟನೆ, ಬೇರೆ ಸಂಘಟನೆಯವರು ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ಪುತ್ತಾರಾ? ಅವರ ಮಕ್ಕಳಿಗೆ ಒಂದು ನಿಯಮ, ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ? ಪ್ರಹ್ಲಾದ್ ಜೋಶಿ, ಆರ್.ಅಶೋಕ್, ಠಾಕೂರ್ ದೆಹಲಿ ಕ್ಯಾಬಿನೆಟ್ ಸಚಿವರ ಮಕ್ಕಳು ಏನ್ ಮಾಡ್ತಿದ್ದಾರೆ ಒಮ್ಮೆ ನೋಡಿ. ಇವರ ಮಕ್ಕಳೆಲ್ಲ ಯಾಕೆ ಗಣವೇಷ ಹಾಕಿಕೊಳ್ಳುತ್ತಿಲ್ಲ. ಇವರ ಮಕ್ಕಳೆಲ್ಲ ಯಾಕೆ ಗೋಮೂತ್ರ ಕುಡಿಯುತ್ತಿಲ್ಲ. ಇವರ ಮಕ್ಕಳೆಲ್ಲ ಯಾಕೆ ಗಂಗಾ ನದಿಯಲ್ಲಿ ಮುಳುಗುತ್ತಿಲ್ಲ ಎಂದು ಪ್ರಶ್ನಿಸಿದರು.
