ಕನ್ನಡದ ಅಸ್ಮಿತೆಯು ಕರ್ನಾಟಕ ಜನತೆಯ ಉಸಿರಾಗಿದೆ. ನಾಡು ನುಡಿ ನೆಲ ಜಲಗಳಿಗೆ ಅನೇಕ ಮಹನೀಯರ ಹೋರಾಟ ತ್ಯಾಗ ಬಲಿದಾನಗಳು ನಡೆದಿರುವುದನ್ನು ಸದಾ ಸ್ಮರಿಸುವಂತಾಗಬೇಕೆಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
ಕೋಲಾರ (ನ.02): ಕನ್ನಡದ ಅಸ್ಮಿತೆಯು ಕರ್ನಾಟಕ ಜನತೆಯ ಉಸಿರಾಗಿದೆ. ನಾಲ್ಕು ಪ್ರಾಂತ್ಯಗಳ ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಅಖಂಡ ಕರ್ನಾಟಕ ರಚಿಸಲಾಯಿತು. ನಾಡು ನುಡಿ ನೆಲ ಜಲಗಳಿಗೆ ಅನೇಕ ಮಹನೀಯರ ಹೋರಾಟ ತ್ಯಾಗ ಬಲಿದಾನಗಳು ನಡೆದಿರುವುದನ್ನು ಸದಾ ಸ್ಮರಿಸುವಂತಾಗಬೇಕೆಂದು ಜಿಲ್ಲಾ ಉಸ್ತುವಾರಿ-ನಗರ ಯೋಜನಾ ಅಭಿವೃದ್ದಿ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಕಳೆದ 1972ರಲ್ಲಿ ಮಾಜಿ ಸಿಎಂ ದಿ. ದೇವರಾಜ್ ಅರಸ್ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಿಸಿದರು. ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಘೋಷಿಸಿದ್ದು ಅವಿಸ್ಮರಣೀಯ ಎಂದರು.
ಮೊದಲ ಸಿಎಂ ನೀಡಿದ ಜಿಲ್ಲೆ
ರಾಜ್ಯಕ್ಕೆ ಕೋಲಾರ ಜಿಲ್ಲೆಯು ಚಿನ್ನ, ಹಾಲು, ರೇಷ್ಮೇ, ಮಾವು, ಟೊಮೆಟೋ ಸೇರಿದಂತೆ ತರಕಾರಿ ಕೊಡುಗೆಯಾಗಿ ನೀಡಿದೆ. ಇಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದ ರಾಜ್ಯದ ಮೊಟ್ಟ ಮೊದಲ ಸಿಎಂ ಕೆ.ಸಿ.ರೆಡ್ಡಿ, ಟಿ.ಚೆನ್ನಯ್ಯ. ಎಂ.ವಿ. ಕೃಷ್ಣಪ್ಪ ಸೇರಿದಂತೆ ಅನೇಕ ಮಹನೀಯರು ಕೋಲಾರ ಹೆಸರನ್ನು ಮೇಳೈಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಡಿವಿಜಿ, ಮಾಸ್ತಿ, ಸೇರಿದಂತೆ ಅವಿಭಜಿತ ಜಿಲ್ಲೆಯಲ್ಲಿ ನರಸಿಂಹಯ್ಯ, ವಿಶ್ವೇಶ್ವರಯ್ಯ, ಮುಂತಾದವರ ಸಾಧನೆಯ ಹೆಗ್ಗಳಿಕೆಯು ದಾಖಲಾರ್ಹವಾಗಿದೆ ಎಂದರು.
ಕೋಲಾರ ಜಿಲ್ಲೆಗೆ ಯರಗೋಳ್ ಡ್ಯಾಂ ಯೋಜನೆ ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ಕುಡಿಯುವ ನೀರಿನ ಯೋಜನೆ ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿದೆ ಸ್ವಲ್ವ ವಿಳಂಬವಾಗಿದ್ದರೂ ನಿರ್ಲಕ್ಷತೆ ಹೊಂದಿಲ್ಲ. ಕೋಲಾರಕ್ಕೆ ಮೆಡಿಕಲ್ ಕಾಲೇಜು ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ. ಪಿಪಿಕೆ ಸಾಧ್ಯವಾಗದಿದ್ದರೆ ಸರ್ಕಾರದಿಂದಲೇ ಮಾಡಲಾಗುವುದು, 2.84 ಕೋಟಿ ರೂ ವೆಚ್ಚದಲ್ಲಿ ಕೋಲಾರ ರಿಂಗ್ ರೋಡ್‌ಗೆ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಕೆ.ಮಂಜುನಾಥ್, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನಾ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಅಧ್ಯಕ್ಷ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಕುಡಾ ಅಧ್ಯಕ್ಷ ಮಹಮ್ಮದ್ ಷರೀಫ್, ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್, ಕ.ಸಾ.ಪ. ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ, ಜಿಪಂ ಸಿಇಒ ಡಾ.ಪ್ರವೀಣ್ ಬಾಗೇವಾಡಿ, ನಗರಸಭೆ ಪೌರಾಯುಕ್ತ ನವೀನ್‌ಚಂದ್ರ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಎನ್.ತ್ಯಾಗರಾಜ್ ಇದ್ದರು.
