ಜಿಎಸ್‌ಟಿಯನ್ನೂ, ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನೂ ಕಾಪಿ ಮಾಡಿದೆ. ಕಾಪಿ ಹೊಡೆಯುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಮಂಗಳೂರು (ಅ.07): ರಾಜ್ಯದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪುತ್ತಿರುವುದನ್ನು ನೋಡಿ ಕೇಂದ್ರ ಸರ್ಕಾರವೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿದೆ. ಅದೇ ರೀತಿ ಜಿಎಸ್‌ಟಿಯನ್ನೂ, ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನೂ ಕಾಪಿ ಮಾಡಿದೆ. ಕಾಪಿ ಹೊಡೆಯುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಟೀಕಿಸಿದ್ದಾರೆ. ನಗರದ ಕುದ್ಮುಲ್ ರಂಗರಾವ್ ಪುರಭವನದ ಮಿನಿ ಸಭಾಂಗಣದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಕಳೆದೆರಡು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರು.ನ್ನು ಒಂದು ರುಪಾಯಿ ಕಮಿಷನ್ ಇಲ್ಲದೆ ನೇರವಾಗಿ ಜನರಿಗೆ ಹಸ್ತಾಂತರಿಸಲಾಗಿದೆ. ವಿಪಕ್ಷಗಳ ಟೀಕೆಯ ಹೊರತಾಗಿಯೂ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಟೀಕೆ ಮಾಡ್ತಿದ್ದವರೇ ಈಗ ಕಾಪಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿರೋಧಿಗಳ ಮನೆಯಲ್ಲೂ ಗಾಂಧೀಜಿ: ಮಹಾತ್ಮ ಗಾಂಧೀಜಿ ಅವರ ಬಗ್ಗೆಯೂ ಅಪಪ್ರಚಾರ ಮಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ರಾಜ್ಯದಲ್ಲಿ ಗಾಂಧೀಜಿ ನೆನಪು ಶಾಶ್ವತವಾಗಿಸಲು 10.5 ಕೋಟಿ ಪಠ್ಯ ಪುಸ್ತಕಗಳಲ್ಲಿ ಮಹಾತ್ಮಾ ಗಾಂಧೀಜಿ ಫೋಟೋ, ಸಂವಿಧಾನ ಪೀಠಿಕೆಯನ್ನು ಅಚ್ಚು ಹಾಕಿಸಲಾಗಿದೆ. ಈ ಮೂಲಕ ಗಾಂಧೀಜಿ ಅವರನ್ನು ವಿರೋಧಿಸುವವರ ಮನೆಯಲ್ಲೂ ಗಾಂಧಿಯನ್ನು ನೆನಪಿಸುವ ಕಾರ್ಯ ಶಿಕ್ಷಣ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಮಾಡಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್ ಆರ್. ಪೂಜಾರಿ, ಚೇತನ್ ಬೆಂಗ್ರೆ, ಶಾಲೆಟ್ ಪಿಂಟೊ, ಲಾವಣ್ಯ ಬಳ್ಳಾಲ್, ಪ್ರತಿಭಾ ಕುಳಾಯಿ, ಟಿ.ಎಂ. ಶಹೀದ್, ವಿಶ್ವಾಸ್‌ಕುಮಾರ್ ದಾಸ್, ಅಶೋಕ್ ಕೊಡವೂರು, ಮಂಜುನಾಥ್, ಪ್ರಸಾದ್ ಕಾಂಚನ್ ಮತ್ತಿತರರು ಇದ್ದರು.
ಕರಾವಳಿ ಅಭಿವೃದ್ಧಿಗೆ ಪೂರಕ ಕೆಲಸ
ಅಧಿಕಾರ ಸ್ವೀಕರಿಸಿ ಮಾತನಾಡಿದ ಎಂ.ಎ. ಗಫೂರ್, ತಲಪಾಡಿಯಿಂದ ಕಾರವಾರದವರೆಗಿನ 350 ಕಿ.ಮೀ. ವ್ಯಾಪಿಯ ಕರಾವಳಿ ಅಭಿವೃದ್ಧಿಗೆ ಪೂರಕವಾಗಿ ತನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸುವುದಾಗಿ ಹೇಳಿದರು. ರಾಜ್ಯ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅಭಿವೃದ್ಧಿ ಮಂಡಳಿಯಾಗಿ ಶಾಸನ ಮಾಡಿ ಅಧಿಕಾರ ನೀಡಿದೆ. ಇದೀಗ ಅಗತ್ಯ ನೀತಿ ನಿಯಮಗಳನ್ನು ಜಾರಿಗೊಳಿಸುವುದರೊಂದಿಗೆ ಮಂಡಳಿಯು ಕಾರ್ಯ ನಿರ್ವಹಿಸಲಿದೆ. ಕರಾವಳಿ ಜಿಲ್ಲೆಗಳ ಹಿಂದಿನ ಎಲ್ಲ ಸಚಿವರ ಜತೆಗೆ ಹಾಲಿ ಸಚಿವರ ಮಾರ್ಗದರ್ಶನ, ಸಲಹೆಯೊಂದಿಗೆ ಮಾಸ್ಟರ್ ಪ್ಲಾನ್ ರೂಪಿಸಿಕೊಂಡು ಕರಾವಳಿ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಗಫೂರ್ ಭರವಸೆ ವ್ಯಕ್ತಪಡಿಸಿದರು.
