ಬಿಜೆಪಿ ಶುದ್ಧೀಕರಣವಾಗಬೇಕು ಎಂದು ಪುನರುಚ್ಛರಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿಯ ಯಾವ ಗುಂಪಿನ ಜತೆಯೂ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ (ಆ.07): ಬಿಜೆಪಿ ಶುದ್ಧೀಕರಣವಾಗಬೇಕು ಎಂದು ಪುನರುಚ್ಛರಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿಯ ಯಾವ ಗುಂಪಿನ ಜತೆಯೂ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದು ಭಾರತೀಯ ಬಿಜೆಪಿ ಟೀಂ. ಹೀಗಾಗಿ ನಾನು ಯಾವುದೇ ಟೀಂನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮತ್ತೆ ಯಾರ ಗುಂಪಿನೊಂದಿಗೆ ಹೋಗುವುದಿಲ್ಲ. ಆದರೆ, ಬಿಜೆಪಿ ಶುದ್ಧೀಕರಣಗೊಳ್ಳಬೇಕು ಎಂಬ ಮಾತು ಎಲ್ಲರದ್ದಾಗಿದೆ. ನನ್ನದು ಸಹ ಅದೇ ನಿಲುವಾಗಿದೆ. ಇದೇ ಕಾರಣಕ್ಕಾಗಿಯೇ ನಾನು ಬಿಜೆಪಿಯಿಂದ ಹೊರ ಬಂದಿರುವೆ. ಬಿಜೆಪಿ ಸರಿಯಾಗಬೇಕು ಎಂಬ ಉದ್ದೇಶ ಎಲ್ಲರದ್ದಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ಹುಚ್ಚರ ಸಂತೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜ್ಯ ಕಾಂಗ್ರೆಸ್ ಹುಚ್ಚರ ಸಂತೆಯಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈಗಾಗಲೇ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಭಾರತ ದೇಶದಲ್ಲಿ ದೇಶಕ್ಕೆ ಪೂರಕವಾಗಿ ನೀವು ವರ್ತಿಸುತ್ತಿಲ್ಲ ಎಂದು ಕಟು ಮಾತಿನಲ್ಲಿ ಎಚ್ಚರಿಸಿದೆ. ಚೀನಾದ ವಿಷಯಕ್ಕೆ ಸಂಬಂಧಿಸದಿಂತೆ ಕಾಂಗ್ರೆಸ್ ಯಾವಾಗಲು ಸುಳ್ಳು ಹೇಳುತ್ತಲೇ ಬಂದಿದೆ. ಅದನ್ನೇ ರಾಹುಲ್ ಗಾಂಧಿ ಅವರು ಕೂಡ ಮುಂದುವರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶ ವಿಭಜನೆ ಮಾಡಿದವರು ಕಾಂಗ್ರೆಸಿಗರು. ಸೈನಿಕರಿಗೆ ಅಪಮಾನ ಮಾಡಿದವರು ಕಾಂಗ್ರೆಸಿಗರು. ಭಾರತದ ನೆಲವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳುವ ಮೂಲಕ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಒಂದು ರೀತಿಯಲ್ಲಿ ಚೀನಾದ ಪರ ಅವರು ಮಾತನಾಡುತ್ತಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಅವರು ದೇಶದ ಜನರ ಕ್ಷಮೆ ಕೇಳಬೇಕು ಮತ್ತು ಈ ಕಾಂಗ್ರೆಸ್ ನಾಯಕರು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ದೇಶ ಭಕ್ತರನ್ನು ಯಾವಾಗಲೂ ಸ್ನೇಹಿತರಂತೆ ಕಾಣುತ್ತದೆ. ಕಾಂಗ್ರೆಸ್‌ನವರು ಪಾಠ ಕಲಿಸುವ ಅಗತ್ಯವಿಲ್ಲ. ದೇಶ ದ್ರೋಹದ ಹೇಳಿಕೆ ನೀಡಿರುವ ಅವರು ಈ ದೇಶದಲ್ಲಿ ಬದುಕುವ ಯೋಗ್ಯತೆ ಮತ್ತು ಹಕ್ಕು ಅವರಿಗಿಲ್ಲ ಎಂದರು.
ಸಂತೋಷ್ ಲಾಡ್ ವಿರುದ್ಧ ಕಿಡಿ: ಇನ್ನು ರಾಜ್ಯದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಲಾಡ್ ಅವರಿಗೆ ಇಲ್ಲ. ಮೋದಿ ಜಗತ್ತಿನಲ್ಲಿಯೇ ಹೆಸರಾದವರು. ಕಾರ್ಮಿಕರ ಸಮಸ್ಯೆಗಳನ್ನು ಹೇಳಲು ಮತ್ತು ಅದನ್ನು ನಿವಾರಿಸಲು ಅವರು ಶಿವಮೊಗ್ಗಕ್ಕೆ ಬಂದಿದ್ದರು. ಆದರೆ ಅದನ್ನು ಬಿಟ್ಟು ಮೋದಿ ಅವರ ಬಗ್ಗೆ ದೇಶದ ಜಿಡಿಪಿ ಮತ್ತು ಡಿಮಾನಿಟೈಸೇಷನ್ ಬಗ್ಗೆ ಮಾತನಾಡುತ್ತಾರೆ. ಮೋದಿ ಅವರ ಬಗ್ಗೆ ಮಾತನಾಡುವಾಗ ಅವರು ಎಚ್ಚರಿಕೆಯಿಂದಿರಬೇಕು ಎಂದು ಕಿಡಿಕಾರಿದರು.
