ಗ್ರಾಮೀಣ, ತಾಲೂಕು, ಜಿಲ್ಲಾ, ರಾಜ್ಯ ಹೆದ್ದಾರಿಗಳು ಸೇರಿದಂತೆ ಎಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಿ ಗುಂಡಿಗಳನ್ನು ಮುಚ್ಚಿದ್ದೀರಿ ಎಂದು ಸಿಎಂ ಹೇಳಬೇಕು. ರಾಜ್ಯದಲ್ಲಿ ರಸ್ತೆಗಳು ಯಮಸ್ವರೂಪಿಯಾಗಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ಹೊನ್ನಾಳಿ (ಸೆ.25): ಪ್ರಸ್ತುತ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರವಿದೆ. ರಸ್ತೆಗಳಲ್ಲಿ ಗುಂಡಿ ಬದಲು ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಗುಂಡಿಗಳಲ್ಲೇ ರಸ್ತೆ ಇರುವಂತಾಗಿದೆ. ಗ್ರಾಮೀಣ, ತಾಲೂಕು, ಜಿಲ್ಲಾ, ರಾಜ್ಯ ಹೆದ್ದಾರಿಗಳು ಸೇರಿದಂತೆ ಎಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಿ ಗುಂಡಿಗಳನ್ನು ಮುಚ್ಚಿದ್ದೀರಿ ಎಂದು ಸಿಎಂ ಹೇಳಬೇಕು. ರಾಜ್ಯದಲ್ಲಿ ರಸ್ತೆಗಳು ಯಮಸ್ವರೂಪಿಯಾಗಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು. ಹದಗೆಟ್ಟ ರಸ್ತೆಗಳು, ಎಸ್ಸಿ. ಎಸ್ಟಿ ನಿಗಮಗಳ ಹಣ ದುರ್ಬಳಕೆ ವಿರೋಧಿಸಿ ತಾಲೂಕು ಬಿಜೆಪಿ ವತಿಯಿಂದ ಸರ್ಕಾರದ ವಿರುದ್ಧ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಂತರ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ಚಳವಳಿ ನಡೆಸಿದ ಸಂದರ್ಭ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಇದೊಂದು ಶೂನ್ಯ ಸರ್ಕಾರ. ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ 4 ರಿಂದ 5 ಸಾವಿರ ಮನೆಗಳನ್ನು ಮಂಜೂರು ಮಾಡಿಸಿತ್ತು. ಅಕ್ರಮ-ಸಕ್ರಮದಲ್ಲಿ ಬಗರ್ ಹುಕುಂ ಬಡರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿತ್ತು. ನಿಮ್ಮ ಅಧಿಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಕೋಟಿ ಅನುದಾನ ತಂದಿದ್ದೀರಿ ಎಂದು ಹಾಲಿ ಶಾಸಕರು ಹೇಳಬೇಕು ಎಂದರು. ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಮಾರುತಿ ನಾಯ್ಕ, ನೆಲಹೊನ್ನೆ ಮಂಜುನಾಥ ಕುಂದೂರು ಸುನೀಲ್, ಎಸ್.ಎಸ್. ಬೀರಪ್ಪ, ಪುರಸಭೆ ಸದಸ್ಯ ಬಡಾವಣೆ ರಂಗಪ್ಪ ಮತ್ತಿತರರು ಇದ್ದರು.
ರಾಜ್ಯದಲ್ಲಿ ನ.26ಕ್ಕೆ ಸಿಎಂ ಕುರ್ಚಿ ಕ್ರಾಂತಿ
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನ.26ರಂದು ಕ್ರಾಂತಿಯಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದರು. ಮುಖ್ಯಮಂತ್ರಿ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿಯಾಗಲಿದ್ದು, ಇನ್ನು 2 ತಿಂಗಳಲ್ಲಿ ಕ್ರಾಂತಿಯಾಗುವುದು ನಿಶ್ಚಿತ ಎಂದರು. ನ.26ರಂದು ಮುಖ್ಯಮಂತ್ರಿ ಕುರ್ಚಿಗಾಗಿ ಕ್ರಾಂತಿಯಾಗುವ ಬಗ್ಗೆ ಕಾಂಗ್ರೆಸ್ಸಿನವರೇ ನನಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಬರೆದಿಟ್ಟುಕೊಳ್ಳಿ. ಇನ್ನು 2 ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ಕ್ರಾಂತಿಯಾಗುವುದು ನಿಶ್ಚಿತ, ರಾಜ್ಯದಲ್ಲಿ ರಾಜಕೀಯ ಕ್ರಾಂತಿಯೂ ಆಗಲಿದೆ ಎಂದು ತಿಳಿಸಿದರು.
ನಿರ್ದಿಷ್ಟ ತಿಂಗಳು, ದಿನಾಂಕವನ್ನೂ ನಾನು ಹೇಳಿದ್ದಲ್ಲ. ಕಾಂಗ್ರೆಸ್ ಪಕ್ಷದವರೇ ನವೆಂಬರ್ 26 ಮಹತ್ವದ ದಿನವೆಂದು ತಿಂಗಳು, ದಿನಾಂಕದ ಸಮೇತವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ನ.26ರಂದು ಏನೆಲ್ಲಾ ಆಗಬೇಕು, ಹೊಡೆದಾಟ, ಕಿತ್ತಾಟ, ರಾಜಕೀಯ ಕ್ರಾಂತಿ ಎಲ್ಲವೂ ಆಗುತ್ತವೆ ಎಂದು ಹೇಳಿದರು. ಮಾಜಿ ಸಚಿವ ಕೆ.ಎನ್.ರಾಜಣ್ಣ ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ಎಂದು ಹಿಂದೆಯೇ ಹೇಳಿದ್ದರು. ಕಾಂಗ್ರೆಸ್ಸಿನ ನಾಯಕರೇ ಆಪ್ತವಾಗಿ ಹೇಳುತ್ತಿರುವ ಮಾತುಗಳು. ನ.26ಕ್ಕೆ ನೂರಕ್ಕೆ ನೂರು ಮುಖ್ಯಮಂತ್ರಿ ಕುರ್ಚಿಗಾಗಿ ಗಲಾಟೆ, ಗೊಂದಲಗಳಾಗಲಿವೆ. ಕಾದು ನೋಡಿ. ವೇಯ್ಟ್ ಅಂಡ್ ಸೀ. ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದು ನವೆಂಬರ್ ಕ್ರಾಂತಿ ಅಂತಲೆ. ಸಿಎಂ ಕುರ್ಚಿ ಹೊಡೆದಾಟ, ಬಡಿದಾಟಗಳೂ ನಿಶ್ಚಿತ ಎಂದು ಪುನರುಚ್ಛರಿಸಿದರು.
