ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡ ಸಂಘದ ಸ್ವಯಂಸೇವಕ. ಆರ್‌ಎಸ್‌ಎಸ್ ಸಂಘದೊಂದಿಗೆ ತಮಗೆ ಇರುವ ನಂಟು ಪ್ರಚಾರಕ್ಕಾಗಿ ಅಲ್ಲ, ಅದು ಸಂಸ್ಕಾರದ ಭಾಗವೆಂಬುದಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಾರ್ಕಳ (ಅ.20): ಆರ್‌ಎಸ್‌ಎಸ್ ಸಂಘದೊಂದಿಗೆ ತಮಗೆ ಇರುವ ನಂಟು ಪ್ರಚಾರಕ್ಕಾಗಿ ಅಲ್ಲ, ಅದು ಸಂಸ್ಕಾರದ ಭಾಗವೆಂಬುದಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಅವರು, ಸಂಘ, ಸಂಘಸ್ಥಾನ, ಗಣವೇಷ ಇವು ನಮಗೆ ಪ್ರಚಾರದ ಸರಕಲ್ಲ. ಅದು ಸಂಸ್ಕಾರ, ಅದು ನಮ್ಮ ಶ್ರದ್ಧೆಯ ಭಾಗ. ‘ಸ್ವಯಂಸೇವಕತ್ವ’ ನಮ್ಮ ಸಂಘ ನೀಡಿದ ನಿರಂತರ ಆಸ್ತಿ.
ತಂದೆ ದಿ. ವಾಸುದೇವ ಅವರು ಸಂಘದ ಶ್ರದ್ಧೆಯ ಸ್ವಯಂಸೇವಕರಾಗಿದ್ದು, ಅವರೇ ನನ್ನನ್ನು ಸಂಘದ ಮಡಿಲಿಗೆ ಕರೆತಂದರು ಎಂದು ಶಾಸಕರು ನೆನಪಿಸಿಕೊಂಡಿದ್ದಾರೆ. ನಾನು ವಾಸುದೇವ ಸುನೀಲ್ ಕುಮಾರ್ ಮತ್ತು ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡ ಸಂಘದ ಸ್ವಯಂಸೇವಕ. ನಮ್ಮ ಕುಟುಂಬದಂತೆ ಪೀಳಿಗೆಯಿಂದ ಪೀಳಿಗೆಗೆ ಸ್ವಯಂ ಸೇವಕತ್ವವನ್ನು ಪರಂಪರೆ ಹಾಗೂ ಬಳುವಳಿಯಾಗಿ ಉಳಿಸಿಕೊಂಡು ಬಂದಿರುವ ಲಕ್ಷಾಂತರ ಕುಟುಂಬಗಳು ಈ ದೇಶದಲ್ಲಿವೆ. ಆದರೆ ನಮಗ್ಯಾರಿಗೂ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ಉದ್ದೇಶ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಕೆಲವು ವಲಯಗಳಿಂದ ‘ನಿಮ್ಮ ಮಕ್ಕಳು ಸಂಘಕ್ಕೆ ಹೋಗುತ್ತಾರಾ?’ ಎಂಬ ಪ್ರಶ್ನೆ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಶಾಸಕರು ಪ್ರತಿಕ್ರಿಯೆ ನೀಡುತ್ತಾ, ನಾನು ನನ್ನ ಮಗನನ್ನು ಸ್ವಯಂಸೇವಕನಾಗಿಯೇ ರೂಪಿಸುತ್ತೇನೆ, ಶಾಸಕನಾಗಿಯಲ್ಲ. ಅಧಿಕಾರ ನನ್ನಪ್ಪನಿಂದ ನನಗೆ, ನನ್ನಿಂದ ನನ್ನ ಮುಂದಿನ ಪೀಳಿಗೆಗೆ ಎಂದು ಯೋಚಿಸುವ ಕುಟುಂಬ ರಾಜಕಾರಣದ ಪಳೆಯುಳಿಕೆಗಳಿಗೆ ಈ ಪರಂಪರೆ ಅರ್ಥವಾಗುವುದೇ ಇಲ್ಲ. ಸಂಘದ ಸಂಸ್ಕಾರ, ಶ್ರದ್ಧೆ ಮತ್ತು ಸೇವಾತತ್ವವನ್ನು ರಾಜಕೀಯಕ್ಕಿಂತ ಮೇಲಾಗಿ ಪರಿಗಣಿಸುವ ಮನೋಭಾವವೇ ನಿಜವಾದ ರಾಷ್ಟ್ರೀಯತೆ ಎಂಬ ಸಂದೇಶವನ್ನು ಶಾಸಕರು ತಮ್ಮ ಹೇಳಿಕೆಯ ಮೂಲಕ ಹಂಚಿಕೊಂಡಿದ್ದಾರೆ.
ಬಡಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರ
ಶಾಸಕ ವಿ. ಸುನಿಲ್ ಕುಮಾರ್ ಅವರ ಸೇವಾ ಕಾರ್ಯದ ಭಾಗವಾಗಿ, ಹೆಬ್ರಿ ಗ್ರಾಮದ ಬಡ ಮಹಿಳೆ ಚುಕ್ರಿ ಕೊರಗ ಅವರಿಗೆ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮವು ಭಾನುವಾರ ನಡೆಯಿತು.ಈ ಸಂದರ್ಭ ಶಾಸಕ ವಿ. ಸುನಿಲ್ ಕುಮಾರ್, ಸ್ವತಃ ಚುಕ್ರಿ ಕೊರಗ ಅವರ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸತೀಶ್ ಪೈ, ಲಕ್ಷ್ಮೀನಾರಾಯಣ ನಾಯಕ್, ತಾರಾನಾಥ್ ಬಂಗೇರ, ಸುಧಾಕರ್ ಹೆಗ್ಡೆ, ಅರುಣ್ ಶೆಟ್ಟಿ, ಗಣೇಶ್ ಕುಮಾರ್, ಎಚ್.ಕೆ. ಸುಧಾಕರ್, ಸುರೇಶ್ ಭಂಡಾರಿ, ಪ್ರಸಾದ್ ಭಂಡಾರಿ, ಶಶಿಧರ್, ಭೋಜ ಶೆಟ್ಟಿ, ಚುಕ್ರಿ ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಬಡ ಮಹಿಳೆ ಚುಕ್ರಿ ಕೊರಗ ಹಾಗೂ ಅವರ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳು ಶೀಥಿಲಾವಸ್ಥೆಯ ಮನೆಯಲ್ಲಿ ವಾಸಿಸುತ್ತಿದ್ದರು. ಮಳೆಯಾದರೆ ಮನೆ ಸೋರುತ್ತಿತ್ತು, ಗೋಡೆಗಳು ಬಿರುಕು ಬಿಟ್ಟಿದ್ದವು, ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿತ್ತು. ಮನೆಯ ಪಕ್ಕದ ಶೌಚಾಲಯವೂ ಮಳೆಗೆ ಕೊಚ್ಚಿಹೋಗಿತ್ತು. ಜೀವನ ಸಂಪೂರ್ಣ ಅಸ್ಥಿರವಾಗಿತ್ತು. ಈ ದುಸ್ಥಿತಿ ಮನಗಂಡ ಶಾಸಕರು ತಕ್ಷಣ ಕ್ರಮ ಕೈಗೊಂಡು ಚುಕ್ರಿ ಕೊರಗ ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿ ಹಸ್ತಾಂತರಿಸಿದರು. ಶಾಸಕ ವಿ. ಸುನಿಲ್ ಕುಮಾರ್ ಅವರು ಈ ಹಿಂದೆ ತಮ್ಮ 50ನೇ ಹುಟ್ಟುಹಬ್ಬದ ಸೇವಾ ಕಾರ್ಯದ ಅಂಗವಾಗಿ ಮತ್ತೊಂದು ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದರು.
