ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಬದಲಾವಣೆಯಾಗುತ್ತಿದ್ದು, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕೊನೆಗೊಳ್ಳುವುದು ಖಚಿತ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ (ಅ.17): ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಬದಲಾವಣೆಯಾಗುತ್ತಿದ್ದು, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕೊನೆಗೊಳ್ಳುವುದು ಖಚಿತ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಪ್ರಾರಂಭವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಆಂತರಿಕವಾಗಿ ಕೇಳಿ ಬರುತ್ತಿದೆ.

ಕಾಂಗ್ರೆಸ್ ಜಗಳ ಪ್ರಾರಂಭವಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ’ ಎಂದರು. ‘ಕಾಂಗ್ರೆಸ್‌ನಲ್ಲಿ ಸಚಿವರು, ಶಾಸಕರು ದಿನಕ್ಕೊಂದು ಹೇಳಿಕೆ ನೀಡುವುದನ್ನು ಗಮನಿಸಿದರೆ ಕಾಂಗ್ರೆಸ್‌ ಬೂದಿಮುಚ್ಚಿದ ಕೆಂಡದಂತಾಗಿದೆ. ಶೀಘ್ರದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ವರಿಷ್ಠರೇ ಕೆಳಗೆ ಇಳಿಸುತ್ತಾರೆ’ ಎಂದರು. ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನಕ್ಕೆ ಅವಕಾಶ ಸಿಗದಿದ್ದರೆ ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದರು.

‘ಅಷ್ಟರ ಮಟ್ಟಿಗೆ ರಾಜಕೀಯ ನಡೆದಿಲ್ಲ ಒಂದು ವೇಳೆ ನಡೆದರೂ ಆಶ್ಚರ್ಯ ಪಡಬೇಕಾಗಿಲ್ಲ’ ಎಂದರು. ಗಂಗಾವತಿ ಕ್ಷೇತ್ರಕ್ಕೆ ₹25 ಕೋಟಿ ಅನುದಾನ ಬಂದಿದ್ದು, ನಗರ ಸೇರಿದಂತೆ ಗ್ರಾಮೀಣ ರಸ್ತೆ ಬಲಪಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು. ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಸುತ್ತಮುತ್ತಲಿನ ಐತಿಹಾಸಿಕ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಆನೆಗೊಂದಿಯ ಶ್ರೀಕೃಷ್ಣದೇವರಾಯ ವೃತ್ತ ಮತ್ತು ಪ್ರತಿಮೆ ನವೀಕರಿಸಲಾಗುತ್ತದೆ ಎಂದರು.

ಹಿಂದೂ ಸಮಾಜ ಒಡೆಯುವ ಹುನ್ನಾರ

ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ, ಈ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಕೊಳಕು ರಾಜಕೀಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಆಪಾದಿಸಿದರು. ಸೋನಿಯಾ ಗಾಂಧಿ ಹಾಗೂ ಕ್ರೈಸ್ತ ಮಿಷನರಿಗಳ ಒತ್ತಡದಿಂದಾಗಿಯೇ ಕ್ರೈಸ್ತ ಎಂಬ ಹೆಸರನ್ನು ಸೇರಿಸಿ ಜನರ ಮತಾಂತರ ಮಾಡುವ ಹೀನ ಕೃತ್ಯಕ್ಕೆ ಸಿದ್ದರಾಮಯ್ಯ ಮುಂದಾಗಿರುವುದು ಅತ್ಯಂತ ನಾಚಿಕೆಗೇಡು ಎಂದರು. ಈ ಸಮೀಕ್ಷೆಯಲ್ಲಿ ಜಾತಿಗಳ ನಡುವೆ ಕದನ ಸೃಷ್ಟಿಸುವ ಹುನ್ನಾರವಿದೆ. ಸರ್ಕಾರ ಕೂಡಲೇ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು. ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಸಮೀಕ್ಷೆ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರ ಪ್ರತಿಪಕ್ಷಗಳ ಸಲಹೆ ನಿರಾಕರಿಸಿದರೆ, ಸಮೀಕ್ಷೆಗೆ ಅಸಹಕಾರ ತೋರಿಸುತ್ತೇವೆ. ಸಮೀಕ್ಷೆ ಬರುವವರಿಗೆ ಯಾವುದೇ ಮಾಹಿತಿ ನೀಡದಂತೆ ಬಹಿಷ್ಕರಿಸುತ್ತೇವೆ ಎಂದು ರೆಡ್ಡಿ ಎಚ್ಚರಿಸಿದರು.