ಸಿದ್ದರಾಮಯ್ಯನವರೇ, ಧರ್ಮಸ್ಥಳದ ಹೆಸರನ್ನು ಹಾಳು ಮಾಡುತ್ತಿರುವಾಗ ನೀವೇನು ಮಾಡುತ್ತಿದ್ದೀರಿ ಎಂದು ಬಿ.ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ (ಆ.11): ‘ಮನುಷ್ಯ ಸತ್ತ ನಂತರ ದೇಹವನ್ನು ದೇವಸ್ಥಾನದ ವಠಾರಗಳಲ್ಲಿ ಹೂಳುವುದು ಭಾರತದ ಸಂಸ್ಕೃತಿ. ಮುಸ್ಲಿಮರೇ ನಿಮ್ಮ ಮಸೀದಿಯಲ್ಲಿ, ಕ್ರೈಸ್ತರೇ ನಿಮ್ಮ ಚರ್ಚ್‌ನಲ್ಲಿ ಶವಗಳನ್ನು ಹೂತಿಟ್ಟಿಲ್ಲವೇ?. ಸಿದ್ದರಾಮಯ್ಯನವರೇ, ಧರ್ಮಸ್ಥಳದ ಹೆಸರನ್ನು ಹಾಳು ಮಾಡುತ್ತಿರುವಾಗ ನೀವೇನು ಮಾಡುತ್ತಿದ್ದೀರಿ?’ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರ ಕೇವಲ ಒಂದು ಸಮಾಜಕ್ಕೆ ಅಥವಾ ಜೈನರಿಗೆ ಮಾತ್ರ ಸೀಮಿತವಲ್ಲ. ಅದು ಜಗತ್ತಿಗೆ ಒಂದು ಹೆಮ್ಮೆಯ ಸ್ಥಳವಾಗಿದೆ. ನನ್ನನ್ನು ಜೈಲಿಗೆ ಹಾಕಿದರೂ ಧರ್ಮಸ್ಥಳದ ಹೆಸರು ಹಾಳು ಮಾಡಲು ನಾನು ಎಂದಿಗೂ ಬಿಡುವುದಿಲ್ಲ. ವೀರೇಂದ್ರ ಹೆಗ್ಗಡೆಯವರೇ, ನೀವು ಹೆದರಬೇಡಿ, ಇದನ್ನು ಧೈರ್ಯವಾಗಿ ಎದುರಿಸಿ, ನಿಮ್ಮ ಜೊತೆ ನಾನು, ಕುದ್ರೋಳಿ ದೇವಸ್ಥಾನ ಇದೆ. ಧರ್ಮಸ್ಥಳವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಶವ ಹೂತ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳದ ವಠಾರವನ್ನು ಅಗೆಯುತ್ತಿದ್ದಾರೆ. ಎಸ್‌ಐಟಿಯವರು ಎಷ್ಟೇ ಹುಡುಕಿದರೂ ಏನೂ ಸಿಗುತ್ತಿಲ್ಲ. ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಸಿದ್ದರಾಮಯ್ಯನವರೇ, ನೀವು ಏನು ಮಾಡುತ್ತಿದ್ದೀರಾ?. ದೇವಸ್ಥಾನವನ್ನು ಹಾಳು ಮಾಡುತ್ತಿರುವಾಗ ಮಾತನಾಡುವ ಧೈರ್ಯ ನಿಮಗಿಲ್ಲವೇ ಎಂದು ಪ್ರಶ್ನಿಸಿದರು. ಮೋದಿಯವರೇ, ನೀವು, ನಿಮ್ಮ ಸರ್ಕಾರ ಏನು ಮಾಡುತ್ತಿದೆ?. ಧರ್ಮಸ್ಥಳಕ್ಕೆ ಬಂದು ಅಲ್ಲಿ ನಿಂತು ಭಾಷಣ ಮಾಡಿ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮ ಘರ್ಷಣೆ ಪ್ರಕರಣ: ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್‌ನಲ್ಲಿ ಆ.6ರಂದು ಸಂಜೆ ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಹಾಗೂ ಪಾಂಗಳ ಕ್ರಾಸ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತರು. ಇವರನ್ನು ಶನಿವಾರ ರಾತ್ರಿ ಬಂಧಿಸಿ, ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರು 6 ಮಂದಿಗೂ ಮಧ್ಯಂತರ ಜಾಮೀನು ನೀಡಿದ್ದು, ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದಾರೆ. ಆ.6ರಂದು ಸಂಜೆ ಧರ್ಮಸ್ಥಳ ಗ್ರಾಮ ಕೇಸ್ ಸಂಬಂಧ ವರದಿ ಮಾಡಲು ಹೋಗಿದ್ದ ಯೂಟ್ಯೂಬರ್ ಮೇಲೆ ಪಾಂಗಳ ಕ್ರಾಸ್‌ನಲ್ಲಿ ಹಲ್ಲೆ ನಡೆಸಲಾಗಿತ್ತು. ಬಳಿಕ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು, 27 ಮಂದಿಯ ವಿರುದ್ಧ ಕೇಸ್ ದಾಖಲಿಸಿದ್ದರು.
