ಜಾತಿ ಸಮೀಕ್ಷೆ ವಿಚಾರದಲ್ಲಿ ಬಿನ್ನಾಭಿಪ್ರಾಯ ಹೊಂದಿರುವ ಸಚಿವರೊಂದಿಗೆ ಚರ್ಚಿಸಿ, ಗೊಂದಲ ಬಗೆಹರಿಸಿ ಮನವೊಲಿಸುವ ತೀರ್ಮಾನ ಆಗಬೇಕಿದೆ. ಅದನ್ನು ಸಿದ್ದರಾಮಯ್ಯ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರು (ಸೆ.20): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ವಿಚಾರದಲ್ಲಿ ಬಿನ್ನಾಭಿಪ್ರಾಯ ಹೊಂದಿರುವ ಸಚಿವರೊಂದಿಗೆ ಚರ್ಚಿಸಿ, ಗೊಂದಲ ಬಗೆಹರಿಸಿ ಮನವೊಲಿಸುವ ತೀರ್ಮಾನ ಆಗಬೇಕಿದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಸಚಿವರ ನಡುವೆಯೇ ಸಮೀಕ್ಷೆ ಬಗ್ಗೆ ಬಿನ್ನಾಭಿಪ್ರಾಯ ವ್ಯಕ್ತವಾಗಿರುವ ಕುರಿತ ಪ್ರಶ್ನೆಗೆ, ನೀವು ಹೇಳಿದಂತೆ ಸಚಿವ ಸಂಪುಟದಲ್ಲಿ ಗೊಂದಲ ಆಯ್ತು ಅಂತ ಹೇಳಿದ್ದಾರೆ.

ಕೆಲವರ ಅಭಿಪ್ರಾಯ ಬೇರೆ ಬೇರೆ ಇತ್ತು ಅಂತ ಹೇಳಿದ್ದಾರೆ. ನಾನು ಇದರ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಮಾತನಾಡುತ್ತೇನೆ. ಯಾವುದೇ ವಿಚಾರದಲ್ಲಿ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕಾದರೆ ಚರ್ಚೆ, ಅಭಿಪ್ರಾಯ ಪಡೆಯಬೇಕಲ್ಲವೇ? ಕೆಲವರ ಅಭಿಪ್ರಾಯ ಬಿನ್ನವಾಗಿರಬಹುದು. ಅವರನ್ನು ಮನವೊಲಿಸಿ ತೀರ್ಮಾನ ಮಾಡುವ ಕೆಲಸವನ್ನು ಮುಖ್ಯಮಂತ್ರಿಯವರು ಮಾಡುತ್ತಾರೆ ಎಂದರು.

ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ

ರಾಜ್ಯದಲ್ಲಿ ಪೊಲೀಸ್‌ ಪೇದೆ ಹುದ್ದೆ ನೇಮಕಾತಿ ವಯೋಮಿತಿ ಸಡಿಸಲು ಮನವಿ ಮಾಡಲಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು. ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿ ಸಡಿಲಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆಬೇರೆ ರಾಜ್ಯದಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ವಯೋಮಿತಿ ಎಷ್ಟು ವರ್ಷ ಇದೆ ಎಂದು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಸುಮಾರು ವರ್ಷಗಳಿಂದ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಎರಡು,‌ ಮೂರು ವರ್ಷ ವಯೋಮಿತಿ ಹೆಚ್ಚಳ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಡಿಜಿಯವರಿಗೆ ಸೂಚನೆ ಕೊಟ್ಟಿದ್ದೇನೆ ಎಂದ ಅವರು, ಪೊಲೀಸ್ ದಂಪತಿ ಅಂತರ್ ಜಿಲ್ಲಾ ವರ್ಗಾವಣೆ‌ ಸರ್ಕಾರದ ಆದೇಶದಂತೆ ನಡೆಯುತ್ತಿದೆ. ಯಾವುದೇ ನಿಯಮ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದರು.

ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಸಂವಿಧಾನದ ಅಡಿ ಬರುವ ವಿಚಾರಧಾರೆಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕು.
- ಡಾ.ಜಿ.ಪರಮೇಶ್ವರ್‌, ಗೃಹ ಸಚಿವ