ಸಿಎಂ  ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಮೀಕ್ಷಾ ಸಭೆಯಲ್ಲಿ, ಬೆಂಗಳೂರಿನಲ್ಲಿ ಸಮೀಕ್ಷೆಯ ನಿಧಾನಗತಿಯನ್ನು ಚರ್ಚಿಸಲಾಯಿತು. ಸಭೆಯ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್  ಬೆಂಗಳೂರು ನಗರಕ್ಕೆ ಮಾತ್ರ ಅಕ್ಟೋಬರ್ 31 ರವರೆಗೆ ಸಮೀಕ್ಷೆಯ ಗಡುವು ಎಂದಿದ್ದಾರೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಸಮೀಕ್ಷಾ ಪ್ರಗತಿಯನ್ನು ಪರಿಶೀಲಿಸುವ ಪ್ರಮುಖ ಸಭೆ ಶನಿವಾರ ಬೆಂಗಳೂರಿನ ಕೃಷ್ಣಾ ಕಚೇರಿಯಲ್ಲಿ ನಡೆಯಿತು. ಚಿಕ್ಕಬಳ್ಳಾಪುರದಿಂದ ನೇರವಾಗಿ ಕೃಷ್ಣಾಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ಆರಂಭಗೊಂಡಿತು. ಈ ಸಭೆಯಲ್ಲಿ ಸಮೀಕ್ಷೆ ವಿಸ್ತರಣೆ ಮಾಡಬೇಕೇ ಅಥವಾ ಇಲ್ಲವೇ ಎಂಬ ವಿಚಾರ ಹಾಗೂ ಪ್ರಗತಿ ಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

ಸಮೀಕ್ಷೆ ಪ್ರಗತಿ ಮತ್ತು ವಿಸ್ತರಣೆ ಕುರಿತು ಚರ್ಚೆ

ಸಭೆಯಲ್ಲಿ ಸಮೀಕ್ಷೆಯ ಪ್ರಗತಿಯನ್ನು ವಿಶ್ಲೇಷಿಸಲಾಯಿತು. ಯಾವೆಲ್ಲೆಡೆ ಸಮೀಕ್ಷೆ ಪೂರ್ಣಗೊಂಡಿದೆ ಮತ್ತು ಇನ್ನೂ ಎಷ್ಟು ಮನೆಗಳು ಬಾಕಿಯಿದೆ ಎಂಬ ವಿವರಗಳನ್ನು ಅಧಿಕಾರಿಗಳು ಸಿಎಂಗೆ ನೀಡಿದರು. ಅಧಿಕಾರಿಗಳ ಪ್ರಸ್ತುತಿಯಲ್ಲಿ ಬೆಂಗಳೂರಿನ ಹೊರ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮ ಪ್ರಗತಿಯನ್ನು ಸಾಧಿಸಿರುವುದಾಗಿ ತಿಳಿಸಲಾಯಿತು. ಆದರೆ ಬೆಂಗಳೂರು ನಗರದಲ್ಲಿ ಕೇವಲ 50% ಮಾತ್ರ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸ್ಪಷ್ಟಪಡಿಸಲಾಯಿತು.

ಡಿಸಿಎಂ ಬರುವ ಮುನ್ನವೇ ಸಭೆ ಆರಂಬಿಸಿ ಸಿಎಂ!

ಡಿಸಿಎಂ ಸಭೆಗೆ ಬರುವ ಮುನ್ನವೇ ಸಭೆ ಆರಂಭಿಸಿ ಸಮೀಕ್ಷೆ ಮುಂದುವರಿಸುವ ತೀರ್ಮಾನ ಮಾಡಿದ ಸಿಎಂ ಸಿದ್ದರಾಮಯ್ಯ. ಆದರೆ ಸಭೆ ಮುಗಿಯುವ ಕೆಲವೇ ನಿಮಿಷಗಳ ಮುನ್ನ ಕೃಷ್ಣಾಗೆ ಆಗಮಿಸಿದ ಡಿಕೆ ಶಿವಕುಮಾರ್. ಡಿ ಕೆ ಶಿವಕುಮಾರ್ ಒಳಗೆ ಹೋಗುತ್ತಿದ್ದಂತೆ, ಸಭೆ ಮುಗಿಸಿ ಹೊರ ಬಂದ ರಾಮಲಿಂಗ ರೆಡ್ಡಿ. ಡಿಸಿಎಂ ಕೃಷ್ಣಾಗೆ ಬಂದ ಹತ್ತು ಹನ್ನೆರಡು ನಿಮಿಷಗಳಲ್ಲಿ ಸಿ‌ಎಂ ಸಹ ಸಭೆ ಮುಗಿಸಿ ಹೊರ ಹೋದರು. ಜಾರ್ಜ್ , ತಂಗಡಗಿ, ರಾಮಲಿಂಗ ರೆಡ್ಡಿ ಹಿಂದುಳಿದ ಆಯೋಗದ ಅಧ್ಯಕ್ಷ ಮದುಸೂಧನ್‌ನಾಯಕ್ ಸಹ ಸಭೆಯಿಂದ ತೆರಳಿದರು. ಇದಾದ ನಂತರ ಕೃಷ್ಣಾದಲ್ಲೇ ಇದ್ದ ಡಿಕೆ ಶಿವಕುಮಾರ್ ಜಿಬಿಎ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಮಹೇಶ್ವರ ರಾವ್, ತುಷಾರ್ ಗಿರಿನಾಥ್ ಭಾಗಿಯಾಗಿದ್ದರು.

ಸಭೆಯಲ್ಲಿ ಭಾಗವಹಿಸಿದ ಸಚಿವ ರಾಮಲಿಂಗ ರೆಡ್ಡಿಯವರು, “ರಾಜ್ಯದ 27 ಜಿಲ್ಲೆಗಳಲ್ಲಿ ಸುಮಾರು 90% ಸಮೀಕ್ಷೆ ಪೂರ್ಣಗೊಂಡಿದೆ. ಬೀದರ್, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಾತ್ರ ಸಮೀಕ್ಷೆ ನಿಧಾನಗತಿಯಲ್ಲಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭವಾಗಲು ತಡವಾದದ್ದೇ ಪ್ರಗತಿ ಕುಂದಲು ಪ್ರಮುಖ ಕಾರಣ” ಎಂದು ಹೇಳಿದರು.

ಸಮೀಕ್ಷೆ ವಿಸ್ತರಣೆ ಘೋಷಣೆ

ಸಭೆ ಆರಂಭವಾಗುವ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರು ಸಮೀಕ್ಷೆ ಮುಂದುವರಿಸುವ ತೀರ್ಮಾನ ಕೈಗೊಂಡರು. ಸಭೆ ಮುಗಿಯುವ ಕೆಲವು ನಿಮಿಷಗಳ ಮುನ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೃಷ್ಣಾಗೆ ಆಗಮಿಸಿದರು. ಡಿಸಿಎಂ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಿಎಂ ಹಾಗೂ ಸಚಿವರು ಸಭೆಯಿಂದ ಹೊರಬಂದರು. ಸಭೆಯ ನಂತರ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು.

ಸಭೆಯ ನಂತರ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಸಮೀಕ್ಷೆಗೆ ಇನ್ನೂ ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಸಮಾಜದವರು ಭಾಗವಹಿಸಬೇಕು. ಯಾರೂ ಈ ಅವಕಾಶವನ್ನು ಕಳೆದುಕೊಳ್ಳಬಾರದು. ಬೆಂಗಳೂರಿನ ದಕ್ಷಿಣ ಭಾಗ, ಬೀದರ್ ಮತ್ತು ಧಾರವಾಡವನ್ನು ಬಿಟ್ಟರೆ ಉಳಿದ ಕಡೆ ಸಮೀಕ್ಷೆ ಚೆನ್ನಾಗಿ ನಡೆದಿವೆ. ಆದ್ದರಿಂದ ಅಕ್ಟೋಬರ್ 31 ರವರೆಗೆ ಸಮೀಕ್ಷೆ ವಿಸ್ತರಿಸಲಾಗಿದೆ,” ಎಂದು ಘೋಷಿಸಿದರು.

ಅವರು ಮುಂದುವರೆದು, “ಅಕ್ಟೋಬರ್ 21, 22 ಮತ್ತು 23 ರಂದು ಹಬ್ಬದ ರಜೆ ಇರುವುದರಿಂದ ಆ ದಿನಗಳಲ್ಲಿ ಸಮೀಕ್ಷೆ ನಡೆಯುವುದಿಲ್ಲ. ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದ ಕಾರಣ, ಇತರ ಸರ್ಕಾರಿ ಸಿಬ್ಬಂದಿಯನ್ನು ಬಳಸಿಕೊಂಡು ಸಮೀಕ್ಷೆ ಕಾರ್ಯ ನಡೆಸಲಾಗುತ್ತದೆ” ಎಂದರು.

ಸಚಿವಾಲಯ ಸಿಬ್ಬಂದಿ ಮತ್ತು ಸಮೀಕ್ಷೆ

ಸಚಿವಾಲಯ ಸಿಬ್ಬಂದಿಯಿಂದ ಸಮೀಕ್ಷೆಯಿಂದ ಕೈಬಿಡುವ ಮನವಿ ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅವರು ಮನವಿ ಮಾಡಬಹುದು. ಆದರೆ ಸಮೀಕ್ಷೆ ನಡೆಯಲೇಬೇಕು. ಒತ್ತಡ ಇದೆ ಇಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ಕೆಲಸ ಮಾಡಲು ಸಿದ್ಧರಾಗಿರುವವರು ಸಹ ಇದ್ದಾರೆ,” ಎಂದು ಹೇಳಿದರು.

ರಾಜಕೀಯ ಟೀಕೆಗಳಿಗೆ ಪ್ರತಿಕ್ರಿಯೆ

ಸಂಘ ಪರಿವಾರದ ವಿಚಾರ ಬಿಟ್ಟು ಪ್ರವಾಹದ ಬಗ್ಗೆ ಗಮನಕೊಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ನಾವು ಯಾರ ಬಗ್ಗೆ ಹೊಸದಾಗಿ ಮಾತನಾಡಿಲ್ಲ. ಪ್ರಿಯಾಂಕ್ ಖರ್ಗೆಯೂ ಹೊಸದಾಗಿ ಏನೂ ಹೇಳಿಲ್ಲ. ಜಗದೀಶ ಶೆಟ್ಟರ್ ಕಾಲದಲ್ಲಿ ಹೊರಡಿಸಿದ ಆದೇಶದ ಆಧಾರದ ಮೇಲೆ ಮಾತನಾಡುತ್ತಿದ್ದಾರೆ,” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಸುಧಾ ಮೂರ್ತಿ ಅವರ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದರು. ಅವರು, “ಸುಧಾ ಮೂರ್ಥಿ ಅವರ ಪತ್ರ ಸೀಕ್ರೆಟ್ ಲೆಟರ್ ಅಲ್ಲ. ಅದರಲ್ಲಿ ಯಾವುದೂ ರಹಸ್ಯವಾಗಿಲ್ಲ. ಅದನ್ನು ಮತ್ತೆ ಬಹಿರಂಗಪಡಿಸುವಲ್ಲಿ ಏನೂ ತಪ್ಪಿಲ್ಲ. ಪ್ರಹ್ಲಾದ್ ಜೋಷಿಯವರು ನೇರವಾಗಿ ಭಾಗವಹಿಸಬೇಡಿ ಎಂದು ಹೇಳಿದ್ದಾರೆ. ತೇಜಸ್ವಿ ಸೂರ್ಯ ಕೂಡ ಅದೇ ರೀತಿಯ ಹೇಳಿಕೆ ನೀಡಿದ್ದಾರೆ,” ಎಂದು ಸ್ಪಷ್ಟಪಡಿಸಿದರು.

ಜಿಬಿಎ ಸಮೀಕ್ಷೆಯ ಪ್ರಗತಿ ಕುರಿತು ನಡೆದ ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳಾಗಿವೆ. ಬೆಂಗಳೂರು ನಗರಕ್ಕೆ ಮಾತ್ರ ಅಕ್ಟೋಬರ್ 31 ರವರೆಗೆ ಸಮೀಕ್ಷೆ ವಿಸ್ತರಿಸಲಾಗಿದೆ. ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಸಮೀಕ್ಷೆ ಕಾರ್ಯವನ್ನು ವೇಗಗೊಳಿಸಲು ಕ್ರಮ ಕೈಗೊಳ್ಳಲು ಒಮ್ಮತ ವ್ಯಕ್ತಪಡಿಸಿದ್ದಾರೆ.