ಒಳಮೀಸಲಾತಿ ಅನುಷ್ಠಾನಗೊಳಿಸುವ ಸಂಬಂಧ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವಂತೆ ಕಾನೂನು ಸಚಿವರಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದು, ಒಳಮೀಸಲಾತಿ ಕಾಯ್ದೆ ಬರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರು (ನ.01): ಒಳಮೀಸಲಾತಿ ಅನುಷ್ಠಾನಗೊಳಿಸುವ ಸಂಬಂಧ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವಂತೆ ಕಾನೂನು ಸಚಿವರಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದು, ಒಳಮೀಸಲಾತಿ ಕಾಯ್ದೆ ಬರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಒಳಮೀಸಲಾತಿ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಒಳ ಮೀಸಲಾತಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಬೇಕೆಂದು ತೀರ್ಮಾನ ಆಗಿತ್ತು. ಎ,ಬಿ,ಸಿ ಎಂದು ಮೂರು ವರ್ಗ ಮಾಡಿದ್ದೆವು. ಅದಕ್ಕೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿತ್ತಾದರೂ. ಬಳಿಕ ಕಾಯ್ದೆ ಮಾಡಬೇಕೆಂದು ಹೇಳಲಾಯಿತು. ಮೊನ್ನೆ ಮುಖ್ಯಮಂತ್ರಿಯವರ ನೇತೃತ್ವದ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಿಗೆ, ಕಾಯ್ದೆ ತರಲು ನಿರ್ಧರಿಸಲಾಗಿದೆ ಎಂದರು.

ಒಳ ಮೀಸಲಾತಿ ಆದೇಶ ರದ್ದು ಮಾಡಲು ಸರ್ಕಾರ ಯೋಜಿಸುತ್ತದೆ ಎಂಬ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಗೋವಿಂದ ಕಾರಜೋಳಗೆ ನಾವು ಏನು ಮಾಡುತ್ತಿದ್ದೇವೆ ಎಂದು ಅರ್ಥ ಆಗಿಲ್ಲ. ಒಳ ಮೀಸಲಾತಿ ವಿಚಾರವನ್ನು ಅವರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅವರ ಕಾಲದಲ್ಲಿ ಏನೋ ಮಾಡುವುದಕ್ಕೆ ಹೋಗಿ ಏನೇನೋ ಗೊಂದಲ ಮಾಡಿದ್ದರು. ಅದನ್ನ ನಾವು ಬಗೆಹರಿಸಿದ್ದೇವೆ. ಈಗ ಅದಕ್ಕೆ ಕಾನೂನಿನ ಶಕ್ತಿ ಕೊಡಬೇಕೆಂದು ಮಾಡುತ್ತಿದ್ದೇವೆ ಎಂದು ಹೇಳಿದರು.

ಧರ್ಮಸ್ಥಳ ಕೇಸಲ್ಲಿ ಸುಪ್ರೀಂಗೆ ಅರ್ಜಿ ಕುರಿತು ತಜ್ಞರ ಜತೆ ಚರ್ಚೆ

ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆಗೆ ಹೈಕೋರ್ಟ್‌ನಲ್ಲಿ ತಡೆ ನೀಡಿರುವ ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ. ಹೈಕೋರ್ಟ್ ಆದೇಶ ಸಂಪೂರ್ಣವಾಗಿ ನಾನು ನೋಡಿಲ್ಲ. ಕಾನೂನು ಇಲಾಖೆ ಮತ್ತು ಅಡ್ವೊಕೇಟ್‌ ಜನರಲ್‌ (ಎಜಿ) ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಮೇಲ್ಮನವಿ ಮಾಡಬೇಕಾ, ಸುಪ್ರೀಂ ಕೋರ್ಟ್‌ಗೆ ಹೋಗಬೇಕಾ ಎಂಬ ಬಗ್ಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.