ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರುತ್ತಿರುವ ಬೆದರಿಕೆ ಕರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ಅ.16): ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರುತ್ತಿರುವ ಬೆದರಿಕೆ ಕರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವ ನಂಬರ್ ಗಳಿಂದ ಬೆದರಿಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಿಷೇಧ ಬಗ್ಗೆ ಸಿಎಂಗೆ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದ ನಂತರ ಅವರಿಗೆ ಬೆದರಿಕೆ ಕರೆ ಬರುತ್ತಿವೆ. ಯಾರು ಬೆದರಿಕೆ ಕರೆ ಮಾಡಿದ್ದಾರೆ, ಅವು ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ.
ಆರ್‌ಎಸ್‌ಎಸ್ ವಿಚಾರದಲ್ಲಿ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಆ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ಅದಕ್ಕೆ ಅವರಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಬೆದರಿಕೆ ಹಾಕುವವರ ಮೇಲೆ ಕ್ರಮ ಕೈಗೊಳ್ಳದ ಹೊರತು ಇಂಥ ಪ್ರಕರಣಗಳು ನಿಲ್ಲುವುದಿಲ್ಲ ಎಂದರು. ಸಿಎಂ ಔತಣಕೂಟ ಏರ್ಪಡಿಸಿದ್ದು ಸಚಿವ ಸಂಪುಟ ಪುನಾರಚನೆಗಾಗಿ ಅಲ್ಲ. ಸರ್ಕಾರ ಬಂದು ಎರಡೂವರೆ ವರ್ಷ ಕಳೆದಿದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡಬೇಕು ಎಂದು ಮಾತಾಡಿದ್ದೇವೆ. ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದರು. ಪ್ರಿಯಾಂಕ್ ಖರ್ಗೆ ತಮ್ಮ ಅಭಿಪ್ರಾಯವನ್ನು ಪತ್ರದ ಮೂಲಕ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಚರ್ಚಿಸಿ ಕ್ರಮ ಕೈಗೊಳ್ಳುತ್ತಾರೆ. ಪ್ರಿಯಾಂಕ್ ಖರ್ಗೆ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾನು ಆ ಬಗ್ಗೆ ನಿರ್ಧಾರಗಳನ್ನು ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣದಿಂದ ರಾಜ್ಯಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಅವರು ನಮ್ಮ ದೊಡ್ಡ ನಾಯಕರು ಎಂದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ
ಮುಖ್ಯಮಂತ್ರಿಗಳು, ಸಚಿವರಿಗೆ ಔತಣಕೂಟ ಕರೆಯುವುದು ಸಾಮಾನ್ಯ. ಮುಖ್ಯಮಂತ್ರಿಗಳು ಶಾಸಕರಿಗೆ, ಸಚಿವರಿಗೆ ಸೋಮವಾರ ಊಟಕ್ಕೆ ಕರೆದಿದ್ದಾರೆ ಎನ್ನುವುದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಯವರ ಮನಸ್ಥಿತಿ ಏನು ಎಂಬುದು ತಿಳಿಯುತ್ತದೆ. ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಊಟಕ್ಕೆ ಕರೆದಿಲ್ಲ. ಪ್ರತಿ ಅಧಿವೇಶನದ ಸಂದರ್ಭದಲ್ಲೂ ಸಾಮಾನ್ಯವಾಗಿ ಊಟಕ್ಕೆ ಕರೆಯುತ್ತಾರೆ. ಇದೆಲ್ಲ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಇದಕ್ಕೆ ವಿಶೇಷ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
