ರಾಜ್ಯದಲ್ಲಿನ ಪವರ್ ಶೇರಿಂಗ್ ಚರ್ಚೆಗಳ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಪವರ್ ಶೇರಿಂಗ್ (ಅಧಿಕಾರದ ಹಂಚಿಕೆ) ಕುರಿತು ನಡೆಯುತ್ತಿರುವ ಚರ್ಚೆಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ಈ ವಿಷಯದ ಬಗ್ಗೆ ಯಾರೇ ಮಾತನಾಡಿದರೂ ಅದು ಪಕ್ಷಕ್ಕೆ ಹಾನಿ ಉಂಟುಮಾಡುತ್ತದೆ. ಯಾರೂ ಕೂಡ ಪವರ್ ಶೇರಿಂಗ್ ಬಗ್ಗೆ ಮಾತಾಡಕೂಡದು ಎಂದು ಅವರು ಎಚ್ಚರಿಸಿದ್ದಾರೆ. “ಪವರ್ ಶೇರಿಂಗ್ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ. ರಂಗನಾಥ್‌ರಿಗೆ ನಾನು ನೋಟಿಸ್ ಕೊಡಲು ಸೂಚಿಸಿದ್ದೇನೆ. ಆದರೆ ಸಿಎಂ ಸಿದ್ದರಾಮಯ್ಯ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿದಂತೆಯೇ ನಡೆಯುತ್ತದೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದು ಅಂತಿಮ. ಇದರ ಬಗ್ಗೆ ಮಾತನಾಡುವವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವಂತೆ ಪರಿಗಣಿಸಲಾಗುತ್ತದೆ. ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ರೂ ಪಕ್ಷಕ್ಕೆ ಹಾನಿ, ನನ್ನ ಪರವಾಗಿ ಮಾತನಾಡಿದ್ರೂ ಪಕ್ಷಕ್ಕೆ ಹಾನಿಯೇ. ಹೀಗಾಗಿ ಯಾರೂ ಈ ವಿಚಾರ ಚರ್ಚೆ ಮಾಡಬಾರದು ಎಂದು ಸ್ಪಷ್ಟಪಡಿಸಿದರು.
ಪಕ್ಷವೇ ಮೊದಲ ಆದ್ಯತೆ
“ನಮಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಹೈಕಮಾಂಡ್ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ನನ್ನ ಬಾಯಲ್ಲಿ ಬೇರೆ ಮಾತು ಹೇಳಿಸಬೇಡಿ, ನಾನು ಮೂರ್ಖನಲ್ಲ,” ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಬಿಜೆಪಿಗೆ ತೀವ್ರ ಟೀಕೆ
ಬಿಜೆಪಿಯನ್ನು ಟೀಕಿಸಿದ ಅವರು, “ಬಿಜೆಪಿ ನಾಯಕರ ಕ್ರಾಂತಿಯ ವಿಷಯವನ್ನು ಅವರು ತಮ್ಮಲ್ಲಿ ಚರ್ಚೆ ಮಾಡಿಕೊಂಡು ಹೋಗಲಿ. ಅವರಿಗೆ ಸೂಜಿದಾರ ಬೇಕಾದರೆ ನಾನು ಕಳುಹಿಸುತ್ತೇನೆ. ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲಿ. ನಮ್ಮ ಪಕ್ಷದ ವಿಚಾರಗಳಲ್ಲಿ ತಲೆ ಹಾಕಬೇಡಿ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಹಾಗೂ ಗಣವೇಶದ ಕುರಿತ ಟೀಕೆ
ಆರ್‌ಎಸ್‌ಎಸ್ ಸ್ಥಾಪನೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಗಣವೇಶ ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, “ಅವರ ಪಕ್ಷ ಏನು ಬೇಕಾದರೂ ಮಾಡಿಕೊಳ್ಳಲಿ, ಅದು ನಮಗೆ ಸಂಬಂಧಪಟ್ಟದಲ್ಲ. ಆದರೆ ಮಹಾತ್ಮ ಗಾಂಧೀಜಿಯವರು ಏನು ಹೇಳಿದ್ದಾರೆ ನೋಡಿ, ಅವರು ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಎಂದು ಹಾಡಿದರು. ಅಲ್ಲದೆ ಈಶ್ವರ ಅಲ್ಲಾ ತೇರೋ ನಾಮ ಎಂದೂ ಹೇಳಿದ್ದಾರೆ. ಅವರು ಅಲ್ಲಾ ಬಗ್ಗೆ ಮಾತನಾಡಿದ್ದಾರಲ್ಲವೇ? ನಾವು ಕೂಡ ನಾಡಗೀತೆ ಹಾಡಿದ್ದೇವೆ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಜೈನರುದ್ಯಾನ ಎಂದು. ಇದು ಶಾಂತಿಯ ತೋಟ. ನಮ್ಮ ಹೃದಯದಲ್ಲಿ ನಾವು ಶಾಂತಿಯ ಅಡಿಪಾಯ ಹಾಕಿದ್ದೇವೆ. ಅದನ್ನು ಕಿತ್ತೊಗೆಯಲೂ ಆಗದು, ತಪ್ಪಿಸಿಕೊಂಡು ಹೋಗಲೂ ಆಗದು. ಇದು ಶಾಂತಿಯ ತೋಟ ಬಿಜೆಪಿ ಅವರು ಹೊರಗಡೆ ಏನು ಬೇಕಾದರೂ ಮಾತನಾಡಿ ತಪ್ಪಿಸಿಕೊಳ್ಳಬಹುದು. ಈ ಹೃದಯ ಇದೆಯಲ್ಲ ಅದರಲ್ಲಿ ನಾವು ಫೌಂಡೇಶನ್ ಹಾಕಿದ್ದೇವೆ. ಅವರು ತಪ್ಪಿಸಿಕೊಳ್ಳಲು ಆಗಲ್ಲ ಕಿತ್ತು ಹಾಕೋಕೂ ಕೂಡ ಆಗಲ್ಲ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
