ತನಿಖೆ ಬಗ್ಗೆ ಈಗ ಏನೂ ಹೇಳುವುದಕ್ಕೆ ಆಗುವುದಿಲ್ಲ. ಹೇಳಿದರೆ ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಮೊದಲು ಯಾರು ಏನು ಹೇಳಿದರೂ ಅದು ಊಹಾಪೂಹ ಆಗಿರುತ್ತದೆ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಉಡುಪಿ (ಆ.24): ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಆರೋಪ ಮಾಡುತ್ತಲೇ ಇರುತ್ತಾರೆ. ಯಾರ್‍ಯಾರೋ ಹೇಳಿಕೆಗಳನ್ನು ನೀಡುತಿದ್ದಾರೆ. ಆ ಹೇಳಿಕೆಗಳ ಅಧಾರದಲ್ಲಿ ತನಿಖೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದ್ದಾರೆ. ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಸ್‌ಐಟಿ ಅಂತಿಮ ವರದಿ ನೀಡುವರೆಗೂ ತನಿಖೆ ಪೂರ್ಣಗೊಳ್ಳುವುದಿಲ್ಲ.

ತನಿಖೆ ಬಗ್ಗೆ ಈಗ ಏನೂ ಹೇಳುವುದಕ್ಕೆ ಆಗುವುದಿಲ್ಲ. ಹೇಳಿದರೆ ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಮೊದಲು ಯಾರು ಏನು ಹೇಳಿದರೂ ಅದು ಊಹಾಪೂಹ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಕೂಡ ಎಸ್‌ಐಟಿ ತನಿಖೆಯ ಭಾಗವಾಗಿದ್ದಾರೆ. ಅವರ ಆರೋಪದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ವರದಿ ಬಂದ ಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದರು.

ಪೂಂಜ ಸ್ಟೇ ತಂದಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜ ಹೇಳಿದ್ದು 2023ರಲ್ಲಿ. ಅವರು ಆಗಲೇ ತಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಂತೆ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಅವರ ಮೇಲೆ ಕ್ರಮ ತಗೊಂಡಿಲ್ಲ. ತಡೆಯಾಜ್ಞೆ ತೆರವು ಆದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾರಿಂದಲೂ ರಾಜಕಾರಣ ಬೇಡ: ಬಿಜೆಪಿಯಿಂದ ಧರ್ಮಸ್ಥಳ ಚಲೋ ಸಂಬಂಧ ಸೋಮವಾರ (ಇಂದು) ವಿಧಾನಸಭೆ ಸದನದಲ್ಲಿ ಸಂಪೂರ್ಣ ಉತ್ತರ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದರು. ಧರ್ಮಸ್ಥಳ ವಿಚಾರದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು. ಧರ್ಮಸ್ಥಳ ಪ್ರಕರಣ ನ್ಯಾಯಕ್ಕೆ ಹಾಗೂ ಕಾನೂನಿಗೆ ಸಂಬಂಧಿಸಿದ್ದು. ಯಾವುದೇ ವ್ಯಕ್ತಿ ಕಂಪ್ಲೇಂಟ್ ಕೊಟ್ಟರೆ ಪೊಲೀಸರು ಎಫ್ಐಆರ್ ಹಾಕಿ ತನಿಖೆ ಮಾಡ್ತಾರೆ.

ತಪ್ಪು ಕಂಡು ಬಂದರೆ ಮಾತ್ರ ಕೇಸ್ ಮುಂದುವರಿಸುತ್ತಾರೆ. ಅಷ್ಟಕ್ಕೇ ಸೀಮಿತವಾಗಬೇಕೆ ವಿನಃ ರಾಜಕೀಯ ಮಾಡಬಾರದು ಎಂದು ಬಿಜೆಪಿಗರಿಗೆ ಪರೋಕ್ಷವಾಗಿ ಛಾಟಿ ಬೀಸಿದರು. ಧಾರ್ಮಿಕ ವಿಚಾರ ಎಳೆದು ತರೋದು ಸರಿಯಲ್ಲ. ಎಸ್ಐಟಿ ತನಿಖೆ ಪೂರ್ಣಗೊಳ್ಳಲು ಬಿಡಬೇಕು. ಸತ್ಯಾಸತ್ಯತೆ ಗೊತ್ತಾಗುತ್ತೆ ಅಲ್ಲಿಯ ತನಕ ಸ್ವಲ್ಪ ಕಾಯಬೇಕಲ್ವ ಎಂದರು.

ಎಸ್‌ಐಟಿಗೆ ಬಿಟ್ಟ ವಿಚಾರ: ಧರ್ಮಸ್ಥಳ ಪ್ರಕರಣದಲ್ಲಿ ಮಧ್ಯಂತರ ವರದಿ ಕೊಡಬೇಕಾ? ಅಂತಿಮ ವರದಿ ಕೊಡಬೇಕಾ? ಎನ್ನೋದು ಎಸ್ಐಟಿಗೆ ಬಿಟ್ಟ ವಿಚಾರ. ರಾಜ್ಯ ಸರ್ಕಾರ ಎಸ್‌ಐಟಿಗೆ ಯಾವುದೇ ನಿರ್ದೇಶನ ಕೊಡಲ್ಲ ಮತ್ತು ಎಸ್ಐಟಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಆ ವಿಚಾರದಲ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ. ಧರ್ಮಸ್ಥಳ ವಿಚಾರ ರಾಜಕೀಯ ಆಗಬಾರದು. ಯಾರೂ ಕೂಡ ರಾಜಕೀಯ ಮಾಡಬಾರದು ಎಂದು ಮತ್ತೆ ಒತ್ತಿ ಹೇಳಿದರು.