ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ 40 ಕೋಟಿ ರು. ಮೀಸಲಿಡಲಾಗಿದೆ. ಇದು ಎಸ್ಸಿ/ಎಸ್ಟಿ ಸಮುದಾಯದ 500 ವಿದ್ಯಾರ್ಥಿಗಳಿಗೆ ಒಮ್ಮೆಗೆ ತರಬೇತಿ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರು (ಅ.09): ಮಹರ್ಷಿ ವಾಲ್ಮೀಕಿ ಶೋಷಿತ ಸಮುದಾಯದಲ್ಲಿ ಹುಟ್ಟಿ ಬದುಕನ್ನು ಬದಲಿಸುವಂತಹ ಮಹಾಕಾವ್ಯವನ್ನು ರೂಪಿಸಿದರು. ಅವರ ಮೌಲ್ಯಗಳು, ಅವರ ರಚನೆಗಳನ್ನು ಜನರಿಗೆ ತಿಳಿಸಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಮೂಲಕ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ 40 ಕೋಟಿ ರು. ಮೀಸಲಿಡಲಾಗಿದೆ. ಇದು ಎಸ್ಸಿ/ಎಸ್ಟಿ ಸಮುದಾಯದ 500 ವಿದ್ಯಾರ್ಥಿಗಳಿಗೆ ಒಮ್ಮೆಗೆ ತರಬೇತಿ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ರಾಜ್ಯದ 10 ಜಿಲ್ಲೆಗಳಲ್ಲಿ ಹೊಸದಾಗಿ ಭೂಮಿ ಖರೀದಿಸಿ ಎಸ್ಸಿ/ಎಸ್ಟಿ ಕಾಲೋನಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಅದಕ್ಕೆ ಮಹರ್ಷಿ ವಾಲ್ಮೀಕಿ ಅಥವಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಲಾಗುವುದು. ಉಳಿದಂತೆ ಬೆಂಗಳೂರಿನಲ್ಲಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜತೆಗೆ ಮುಂದಿನ ವರ್ಷದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.
ಸಿಎಂ ಬಳಿ ನಿಯೋಗ
ಕಲ್ಯಾಣ ಕರ್ನಾಟಕಕ್ಕೆ ನೀಡಿದ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಭಾಗಕ್ಕೂ ಪ್ರತ್ಯೇಕ ಅನುದಾನ ನೀಡುವುದು ಅಗತ್ಯವಿದ್ದು, ಇದಕ್ಕಾಗಿ ಈ ಭಾಗದ 34 ಶಾಸಕ, ಸಚಿವರು ಸೇರಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದು ಒತ್ತಾಯಿಸಲಾಗುವುದು ಎಂದು ಹೇಳಿದರು. ಕಿತ್ತೂರು ಕರ್ನಾಟಕ ಭಾಗವೂ ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಲ್ಲೂ ಅಭಿವೃದ್ಧಿಗೆ ಹಣಕಾಸಿನ ಅವಶ್ಯಕತೆ ಇದೆ. ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಕುಳಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.
ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಅ.15ರ ನಂತರ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು. ಮೊದಲ ಹಂತದಲ್ಲಿ ಗುಂಡಿ ಮುಚ್ಚಲು ₹ 700 ಕೋಟಿ ನೀಡಲಾಗಿದೆ. ನಂತರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಸೂಚಿ ತಯಾರಿಸಲಾಗುವುದು ಎಂದು ಸಚಿವರು ಹೇಳಿದರು. ಜಾತಿ ಜನಗಣತಿಯ 60 ಪ್ರಶ್ನಾವಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಸುಸ್ತಾಗಿ ಸರಳೀಕರಣ ಮಾಡಲು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ನನ್ನದು ಸಹಮತ ಇದೆ. ಪ್ರಶ್ನೆಗಳನ್ನು ಕಡಿಮೆ ಮಾಡಬೇಕು. ಅಲ್ಲದೇ ಜನರು ತಮಗೆ ಇಷ್ಟ ಇರುವ ಪ್ರಶ್ನೆಗೆ ಮಾತ್ರ ಉತ್ತರಿಸಬಹುದಾಗಿದೆ. ಪ್ರಶ್ನಾವಳಿ ತಯಾರಿಸಿದ್ದು ಆಯೋಗದವರು. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅವರು ಸರ್ಕಾರಕ್ಕೆ ಎಲ್ಲವನ್ನೂ ತಿಳಿಸಬೇಕೆಂದಿಲ್ಲ ಎಂದರು.
