ಡಿ.ಕೆ.ಶಿವಕುಮಾರ್ ಅವರು ಸದನದಲ್ಲೇ ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’ ಎಂದು ಆರ್‌ಎಸ್‌ಎಸ್‌ ಗೀತೆ ಹಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಆ.23): ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸದನದಲ್ಲೇ ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’ ಎಂದು ಆರ್‌ಎಸ್‌ಎಸ್‌ ಗೀತೆ ಹಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ವೇಳೆ ತಮಗೆ ತೊಂದರೆಯಾದರೆ ಬಿಜೆಪಿ ಜತೆ ಸಖ್ಯ ಬೆಳೆಸುವುದಾಗಿ ಡಿ.ಕೆ.ಶಿವಕುಮಾರ್‌ ಪರೋಕ್ಷ ಮುನ್ಸೂಚನೆ ನೀಡಿದ್ದಾರೆ ಎಂಬ ವಿಶ್ಲೇಷಣೆ ಶುರುವಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ಗೆ ಬಿಜೆಪಿಯ ಖಟ್ಟರ್ ಹಿಂದುತ್ವದಿಂದ ಆಗುತ್ತಿರುವ ನಷ್ಟ ತಡೆಯಲು ಡಿ.ಕೆ.ಶಿವಕುಮಾರ್‌ ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿದ್ದಾರೆ.

ಸಾರ್ವಜನಿಕವಾಗಿ ಮೃದು ಹಿಂದುತ್ವ ಪ್ರದರ್ಶನ ಡಿ.ಕೆ.ಶಿವಕುಮಾರ್ ಹಿಂದಿನಿಂದಲೂ ಅನುಸರಿಸುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳುವ ಮೂಲಕ ಧರ್ಮಸ್ಥಳ ಗ್ರಾಮದಲ್ಲಿ ಅಸ್ಥಿ ಉತ್ಖನನ ಪ್ರಕರಣದಲ್ಲಿ ಸರ್ಕಾರಕ್ಕೆ ಆಗುತ್ತಿದ್ದ ಸಂಭವನೀಯ ಡ್ಯಾಮೇಜ್ ತಪ್ಪಿಸಲು ಯತ್ನಿಸಿದ್ದರು. ಆದರೆ ಆಗಲೂ ಅವರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಹೀಗಾಗಿಯೇ ಧರ್ಮಸ್ಥಳ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ ಎಂಬ ಚರ್ಚೆಯಾಗಿತ್ತು.

ಇದೀಗ ಕಾಂಗ್ರೆಸ್‌ ಕಟುವಾಗಿ ಟೀಕಿಸುವ ಆರ್‌ಎಸ್‌ಎಸ್‌ನ ಗೀತೆ ಸದನದಲ್ಲಿ ಹಾಡುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ. ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ವೇಳೆ ಸಮಸ್ಯೆಯಾದರೆ ಬಿಜೆಪಿ ಕಡೆ ಮುಖ ಮಾಡುತ್ತಾರೆಯೇ ಎಂಬ ಚರ್ಚೆಗಳೂ ಹುಟ್ಟಿಕೊಂಡಿವೆ. ಮತ್ತೊಂದೆಡೆ ಇದು ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ನಡೆ, ಕಾಂಗ್ರೆಸ್‌ ಪಕ್ಷವನ್ನು ಹಿಂದು ವಿರೋಧಿ ಎಂದು ಬಿಂಬಿಸುವವರಿಗೆ ಪ್ರತ್ಯುತ್ತರ ನೀಡುವ ತಂತ್ರಗಾರಿಕೆಯಾಗಿ ಸಾಫ್ಟ್ ಹಿಂದುತ್ವ ಅಪ್ಪಿಕೊಂಡಿದ್ದಾರೆ. ಹೀಗಾಗಿಯೇ ಯಮತ್ತೂರಿನಲ್ಲಿ ಮಹಾಶಿವರಾತ್ರಿ ಆಚರಣೆಗಾಗಿ ಇಶಾ ಯೋಗ ಕೇಂದ್ರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭೇಟಿ ನೀಡಿದ್ದರಿಂದ ಹಿಡಿದು ಪ್ರತಿ ಹಂತದಲ್ಲೂ ಡಿ.ಕೆ.ಶಿವಕುಮಾರ್‌ ಪ್ರತಿ ನಡೆಯಲ್ಲೂ ಮೃದು ಹಿಂದುತ್ವ ಪ್ರದರ್ಶನ ಮಾಡುತ್ತಿದ್ದಾರೆ.

ಪ್ರಯಾಗ್‌ ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಹಿಡಿದು ಬೆಳಗಾವಿಯ ಪೂಜ್ಯ ಕಪಿಲೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 111 ಲೀಟರ್ ಹಾಲು ಅರ್ಪಿಸಿದ ಲಿಂಗಾಭಿಷೇಕದವರೆಗೆ ಅವರ ದೇವಾಲಯ ಭೇಟಿಗಳು ಹಾಗೂ ಹಿಂದುತ್ವ, ಧಾರ್ಮಿಕ ಶ್ರದ್ಧೆ ಪ್ರದರ್ಶನ ಮುಂದುವರೆಯುತ್ತಲೇ ಇದೆ. ಜತೆಗೆ ‘ನಾನು ಹಿಂದೂ, ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯುತ್ತೇನೆ. ಆದರೂ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಅವರು ಮಹಾಶಿವರಾತ್ರಿಯಂದು ಘೋಷಿಸಿದ್ದರು. ಹೀಗಾಗಿ ಇದು ಸಹ ಸಾಫ್ಟ್‌ ಹಿಂದುತ್ವದ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.