ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿ.ಕೆ.ಶಿವಕುಮಾರ್ ಸವಾಲೆಸೆದರು.
ರಾಯಚೂರು (ಅ.24): ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲೆಸೆದರು. ತಾಲೂಕಿನ ಗಾಣಧಾಳ ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.
ವ್ಯಕ್ತಿಗಿಂತ ಪಕ್ಷ ಮುಖ್ಯ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಬೇಕು. ನಾನು ಎಂದಿಗೂ ಗುಂಪು ರಾಜಕಾರಣ ಮಾಡಿಲ್ಲ. ಮಾಡಿದ್ದರೆ ಏನೇನೋ ಮಾಡ ಬಹುದಿತ್ತು. ಕಾಂಗ್ರೆಸ್ ಪಕ್ಷ ಇದ್ದರೆ, ನಾವು ನೀವು ಇರುತ್ತೇವೆ. ನಾನು ಉಪಮುಖ್ಯಮಂತ್ರಿಯಾಗಿರುವುದು, ದದ್ದಲ್ ಅವರು ಶಾಸಕರು ಹಾಗೂ ಅಧ್ಯಕ್ಷರಾಗಿ ದ್ದಾರೆ. ಬೋಸರಾಜು ಅವರು ಶಾಸಕರಲ್ಲದಿದ್ದರೂ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರು 45 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ತೆಲಂಗಾಣದಲ್ಲಿ ದುಡಿದಿದ್ದಾರೆ. ಹಗಲು ರಾತ್ರಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದರು.
ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಬಾರದು. ನೀವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಮಾಡಬೇಕು. ಯಾವ ಗುಂಪು ಇರಬಾರದು. ಇಲ್ಲಿ ಕೇವಲ ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇರಬೇಕು. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಬೇಕು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಅನೇಕ ಜನರು ಪ್ರಯತ್ನಿಸುತ್ತಿದ್ದಾರೆ. ಹಳ್ಳಿಗಳಲ್ಲೂ ಪಕ್ಷ ಸೇರಲು ಜನ ಮುಂದೆ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಎಲ್ಲರನ್ನು ಸೇರಿಸಿಕೊಳ್ಳಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು ಸೇರಿ ಶಾಸಕರು,ಸಂಸದರು, ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.
‘ಬದ್ಧತೆ ಇದ್ದರೆ ಬನ್ನಿ.. ನೀರಾವರಿ ಯೋಜನೆಗಾಗಿ ಒತ್ತಡ ಹಾಕೋಣ’
ಬಿಜೆಪಿ ನಾಯಕರೇ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ, ಬದ್ಧತೆ ಇದ್ದರೆ ಬನ್ನಿ. ನೀವು ನಿಗದಿ ಮಾಡುವ ಸಮಯಕ್ಕೆ ನಾನು ಬರುತ್ತೇನೆ. ನಾನು ಈಗಾಗಲೇ ಸುಮಾರು 10 ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿ ಗಳ ಮುಂದೆ ಗೋಗರೆದಿದ್ದೇನೆ. ಆದರೂ ಅವರು ಸಹಾಯ ಮಾಡಿಲ್ಲ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ₹5,300 ಕೋಟಿ ಇದುವರೆಗೂ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
