ರಾಜ್ಯದಲ್ಲಿ ಸಂಪುಟ ಪುನರಾಚನೆ ಸೇರಿ ಮಹತ್ವದ ರಾಜಕೀಯ ಬೆಳವಣಿಗೆ ನಿರೀಕ್ಷಿಸಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2028ರ ಚುನಾವಣೆಯಲ್ಲೂ ಸ್ಪರ್ಧಿಸುವಂತೆ ನನಗೆ ಒತ್ತಡವಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಅ.29): ರಾಜ್ಯದಲ್ಲಿ ಸಂಪುಟ ಪುನರಾಚನೆ ಸೇರಿ ಮಹತ್ವದ ರಾಜಕೀಯ ಬೆಳವಣಿಗೆ ನಿರೀಕ್ಷಿಸಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘2028ರ ಚುನಾವಣೆಯಲ್ಲೂ ಸ್ಪರ್ಧಿಸುವಂತೆ ನನಗೆ ಒತ್ತಡವಿದೆ’ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ 2023ರ ಸಾರ್ವತ್ರಿಕ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ ಎಂದಿದ್ದ ಸಿದ್ದರಾಮಯ್ಯ ತಮ್ಮ ಚುನಾವಣಾ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದರು.
ಆದರೆ ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ ನೀಡಿದ ಸಿದ್ದರಾಮಯ್ಯ ಪುನಃ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ಹಲವು ಸಚಿವರು ಬೆಂಬಲಿಸಿದ್ದು, ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲೂ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದು ಸ್ಪರ್ಧೆ ಖಚಿತ-ಬೈರತಿ ಸುರೇಶ್: ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಅವರ ಸ್ಪರ್ಧೆ ಆಗಲೇಬೇಕು. ಇದು ನಮ್ಮೆಲ್ಲರ ಹಕ್ಕೊತ್ತಾಯ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ನಿವೃತ್ತಿ ಇಲ್ಲ-ಜಾರಕಿಹೊಳಿ: ಸಿದ್ದರಾಮಯ್ಯ ಅವರ ನೇತೃತ್ವದ ಅವಶ್ಯಕತೆ ನಮಗೆ ಇದೆ. ಇಂದು ಹಾಗೂ ಮುಂದೆಯೂ ಅವರ ಆಶೀರ್ವಾದ ಬೇಕು. ಸಿದ್ದರಾಮಯ್ಯ ಅವರು 2028ಕ್ಕೆ ಚುನಾವಣೆಗೆ ನಿಲ್ಲುತ್ತಾರಾ ಎಂಬುದು ಅವರ ವೈಯಕ್ತಿಕ ವಿಚಾರ. ಸದನದಲ್ಲೇ ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಆದರೆ ರಾಜಕೀಯದಲ್ಲಿ ಯಾವುದೇ ನಿವೃತ್ತಿ ಇರುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ಸ್ಪರ್ಧಿಸಬೇಕು-ಲಾಡ್: ಸಚಿವ ಸಂತೋಷ್ ಲಾಡ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಅವರು ಸುದೀರ್ಘ ಕಾಲ ರಾಜಕಾರಣದಲ್ಲಿದ್ದು, ಜನ ಸೇವೆ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ಇನ್ನು ಮೈಸೂರಿನಲ್ಲಿ ಮಾತನಾಡಿರುವ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ರಾಜ್ಯಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದು ಅನಿವಾರ್ಯ. ಬಹುತೇಕ ಕಾಂಗ್ರೆಸ್ ಪಕ್ಷದ ಶಾಸಕರ ಅಭಿಪ್ರಾಯ ಕೂಡ ಇದೇ ಆಗಿದೆ ಎಂದು ಹೇಳಿದ್ದಾರೆ. ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ, ದಲಿತ ಮುಖ್ಯಮಂತ್ರಿ ಕೂಗು ಸೇರಿ ವಿವಿಧ ರಾಜಕೀಯ ಚರ್ಚೆಗಳ ನಡುವೆ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಕುರಿತ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ.
2028ರಲ್ಲೂ ಸ್ಪರ್ಧಿಸಿ ಎಂದು ಸ್ನೇಹಿತರ ಒತ್ತಾಯ
ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘2028ರ ವಿಧಾನಸಭಾ ಚುನಾವಣೆಯಲ್ಲೂ ನಾನು ಸ್ಪರ್ಧೆ ಮಾಡಬೇಕು ಎಂದು ನನ್ನ ಸ್ನೇಹಿತರು, ಬೆಂಬಲಿಗರು ಹೇಳುತ್ತಿದ್ದಾರೆ. ಹಿಂದೆ ನಾನು 2028ರಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈಗ ನನ್ನ ಸ್ನೇಹಿತರು ನೀವು ಸ್ಪರ್ಧಿಸಿದರೆ ಪಕ್ಷಕ್ಕೆ ದೊಡ್ಡ ಅನುಕೂಲ ಎಂದು ಒತ್ತಾಯಿಸುತ್ತಿದ್ದಾರೆ. ನಾನು ಇದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದು ಹೇಳಿರು. ತನ್ಮೂಲಕ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಸಾಧ್ಯತೆಯನ್ನು ಜೀವಂತವಾಗಿಟ್ಟರು.
