ದಸರಾ ಕಾರ್ಯಕ್ರಮದಿಂದ ಎದ್ದು ಹೋಗುತ್ತಿದ್ದ ಜನರ ಮೇಲೆ ಸಿಎಂ ಸಿದ್ದರಾಮಯ್ಯ ಸಿಟ್ಟು ಪ್ರದರ್ಶಿಸಿದ್ದು, ಮನೆಯಲ್ಲಿ ಇರಬೇಕಿತ್ತು. ಯಾಕೆ ಬರ್ತಿರಾ ಇಲ್ಲಿಗೆ. ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಆಗಲ್ವಾ ಎಂದು ರೇಗಿದ್ದಾರೆ.
ಮೈಸೂರು (ಸೆ.22): ನಾಡ ಅಧಿದೇವತೆ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಹಿರಿಯ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಚಾಲನೆ ನೀಡಿದ್ದಾರೆ. ನಂತರ ಭಾಷಣ ಆರಂಭದಲ್ಲೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಹೌದು! ದಸರಾ ಕಾರ್ಯಕ್ರಮದಿಂದ ಎದ್ದು ಹೋಗುತ್ತಿದ್ದ ಜನರ ಮೇಲೆ ಸಿದ್ದರಾಮಯ್ಯ ಸಿಟ್ಟು ಪ್ರದರ್ಶಿಸಿದ್ದು, ಮನೆಯಲ್ಲಿ ಇರಬೇಕಿತ್ತು. ಯಾಕೆ ಬರ್ತಿರಾ ಇಲ್ಲಿಗೆ. ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಆಗಲ್ವಾ? ಕುಳಿತುಕೊಳ್ಳಲು ಆಗದವರು ಯಾಕೆ ಕಾರ್ಯಕ್ರಮಕ್ಕೆ ಬರ್ತಿರಾ? ಎಂದು ರೇಗಿದ್ದಾರೆ.
ಬಾನು ಮುಷ್ತಾಕ್ ಹುಟ್ಟಿನಿಂದ ಮುಸ್ಲಿಂ ಆಗಿರಬಹುದು. ಆದರೆ ಅವರು ಮನುಷ್ಯರು. ಮನುಷ್ಯರು ಧರ್ಮದ ಆಧಾರದ ಮೇಲೆ ದ್ವೇಷಿಸಬಾರದು. ಧರ್ಮದ ಆಧಾರದ ಮೇಲೆ ದ್ವೇಷ ಮಾಡಿದರೆ ಅದು ಮನುಷ್ಯತ್ವದ ಲಕ್ಷಣ ಅಲ್ಲ. ಶ್ರೀರಂಗಪಟ್ಟಣದಲ್ಲಿ ಹೈದರಾಲಿ, ಟಿಪ್ಪು ದಸರಾ ಮಾಡಿದ್ದರು. ಈ ಇತಿಹಾಸ ಎಲ್ಲರಿಗೂ ಗೊತ್ತಿರಬೇಕು. ಬಾನು ಮುಷ್ತಾಕ್‌ರ ಆಯ್ಕೆಯನ್ನು ರಾಜ್ಯದ ಬಹುತೇಕ ಜನರು ಒಪ್ಪಿದ್ದಾರೆ. ಸ್ವಾರ್ಥಕ್ಕಾಗಿ ರಾಜಕೀಯಕ್ಕಾಗಿ ಇತಿಹಾಸ ತಿರುಚುವುದು ಅಕ್ಷ್ಮಮ್ಯ ಅಪರಾಧ. ರಾಜಕೀಯ ಮಾಡುವುದಾದರೆ ಚುನಾವಣೆ ಇದೆ. ಆಗ ಮಾಡೋಣಾ. ಗೋಡಾ ಹೈ, ಮೈದಾನಾ ಹೈ. ರಾಜಕೀಯ ಮಾಡುವುದಾದರೆ ಅಲ್ಲಿ ಮಾಡೋಣ. ಯಾವುದೋ ರಾಜಕೀಯಕ್ಕಾಗಿ, ದ್ವೇಷ ಮಾಡುವುದಕ್ಕಾಗಿ, ಯಾರನ್ನೋ ಓಲೈಸಲು ರಾಜಕೀಯ ಮಾಡಬಾರದು. ಓಲೈಕೆ ರಾಜಕಾರಣ ಅಪಾಯಕಾರಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಟಿಪ್ಪು, ಹೈದರಾಲಿ ದಸರಾ ಮಾಡಿದ್ದರು: ಟಿಪ್ಪು ದಸರಾ ಮಾಡುವಾಗ ರಾಜರಿಗೆ ಗೌರವ ಧನ ಕೊಟ್ಟಿದ್ದರು. ಟಿಪ್ಪು, ಹೈದರಾಲಿ ದಸರಾ ಮಾಡಿದ್ದರು. ಮಿರ್ಜಾ ಇಸ್ಮಾಯಿಲ್ ರನ್ನು ಮಹಾರಾಜರು ಅಂಬಾರಿಯಲ್ಲೆ ಕೂರಿಸಿ ಕೊಂಡು ಹೋಗಿದ್ದರು. ದಸರಾ ಕೋಮು ಸೌರ್ಹಾದತೆಯ ಸಂಕೇತ. ದಸರಾ ಜಾತಿ, ಧರ್ಮ, ರಾಜಕೀಯ ಮೀರಿದ್ದು. ಇದು ಶ್ರೇಷ್ಠ ನಾಡಹಬ್ಬ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆ ಈ ದಸರಾ. ಸಂವಿಧಾನಕ್ಕಿಂತಾ ಯಾರು ದೊಡ್ಡವರಲ್ಲ. ಬಾನು ಮುಷ್ತಾಕ್‌ರದ್ದು ಧರ್ಮ ಮೀರಿದ ನಡವಳಿಕೆ ಹೊಂದಿದ್ದಾರೆ. ನಮ್ಮ ನಿಲುವು ಸ್ಪಷ್ಟತೆ ಇದ್ದಾಗ ಬೇರೆ ಯಾರಿಗೋ ಉತ್ತರ ಕೊಡುವ ಅಗತ್ಯವಿಲ್ಲ. ಇದು ನಾಡಿನ ಸಮಸ್ತ ಜನರ ಹಬ್ಬ ಇದು. ಧಾರ್ಮಿಕ ಸೌಹಾರ್ದತೆಯ ಸಂಕೇತ ದಸರಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಖಾಸಗಿ ದರ್ಬಾರ್: ರಾಜವಂಶಸ್ಥರ ಸಂಪ್ರದಾಯ
ನವರಾತ್ರಿಯ ಮೊದಲ ದಿನ ಅರಮನೆಯಲ್ಲಿ ಎಣ್ಣೆಶಾಸ್ತ್ರ, ಮಂಗಳ ಸ್ನಾನ, ಸಿಂಹಾಸನಕ್ಕೆ ಸಿಂಹ ಜೋಡಣೆ, ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಹಾಗೂ ವಾಣಿವಿಲಾಸ ಅರಮನೆಯಲ್ಲಿ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಕನಕಧಾರಣೆ, ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಹಸುಗಳ ಆಗಮನ, ದರ್ಬಾರ್ ಹಾಲ್‌ನಲ್ಲಿ ನವಗ್ರಹ ಕಳಸ ಪೂಜೆ ಮತ್ತು ಸಿಂಹಾಸನಾರೋಹಣ, ಕನ್ನಡಿ ತೊಟ್ಟಿಗೆ ಶ್ರೀ ಚಾಮುಂಡೇಶ್ವರಿ ತರುವುದು ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯದಂತೆ ನಡೆಯಲಿದೆ.
ಬೆಳಗ್ಗೆ ಎಣ್ಣೆ ಮಜ್ಜನ ಮುಗಿಸಿ ಬರುವ ಯದುವೀರ್‌ಗೆ ಪತ್ನಿ ತ್ರಿಷಿಕಾ ಕುಮಾರಿ ಪಾದಪೂಜೆ ನೆರವೇರಿಸುವರು. ನಂತರ, ರಾಜವಂಶಸ್ಥರ ಸಂಪ್ರದಾಯದಂತೆ ದರ್ಬಾರ್ ಹಾಲ್‌ಗೆ ಯದುವೀರ್ ಆಗಮಿಸಿ, ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಅದನ್ನು ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್ ಮೊಳಗಲಿದೆ. ಯದುವೀರ್ ಅವರು ಪ್ರತಿದಿನ ಸಂಜೆ ರಾಜ ಪೋಷಾಕಿನಲ್ಲಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
