ಜಾತಿ ಗಣತಿ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಸಮೀಕ್ಷೆಯ ಕುರಿತು ರಾಜ್ಯಪಾಲರು ತಮಗೆ ಯಾವುದೇ ಸೂಚನೆ ನೀಡಿಲ್ಲ, ಪತ್ರವನ್ನೂ ಬರೆದಿಲ್ಲ. ಬಿಜೆಪಿಯವರು ನೀಡಿದ ಪತ್ರವನ್ನೇ ಫಾರ್ವರ್ಡ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗದಗ (ಸೆ.21): ಜಾತಿ ಗಣತಿ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಸಮೀಕ್ಷೆಯ ಕುರಿತು ರಾಜ್ಯಪಾಲರು ತಮಗೆ ಯಾವುದೇ ಸೂಚನೆ ನೀಡಿಲ್ಲ, ಪತ್ರವನ್ನೂ ಬರೆದಿಲ್ಲ. ಬಿಜೆಪಿಯವರು ನೀಡಿದ ಪತ್ರವನ್ನೇ ಫಾರ್ವರ್ಡ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಸೆ.22ರಿಂದ ನಡೆಯಲಿರುವ ಸಮೀಕ್ಷೆಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಬಿಜೆಪಿಯವರು ಮನವಿ ಸಲ್ಲಿಸಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಯ ವಿಚಾರದಲ್ಲಿ ಜಾತಿ ಒಡೆಯುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನನಗೆ ಪತ್ರ ಬರೆದಿಲ್ಲ.
ಬಿಜೆಪಿಯವರು ಬರೆದ ಪತ್ರವನ್ನೇ ಫಾರ್ವರ್ಡ್ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಜಾತಿಗಣತಿಯ ಹಿಂದೆ ಷಡ್ಯಂತ್ರವಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಮಾಡಿರುವ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೂ ಜಾತಿಸಮೀಕ್ಷೆ ನಡೆಸಲಿದ್ದು, ಅದರಲ್ಲಿಯೂ ಷಡ್ಯಂತ್ರವಿರಲಿದೆಯೇ? ಸಮೀಕ್ಷೆಗೆ ಯಾವುದೇ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ಸಮಾನತೆ ತರಲು ಬಡವರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕು ಎನ್ನುವುದು ಸಮೀಕ್ಷೆಯ ಹಿಂದಿರುವ ಉದ್ದೇಶವಾಗಿದೆ ಎಂದು ಹೇಳಿದರು.
ಕುರುಬ ಎಂದು ಬರೆಸಿ
ರಾಜ್ಯಾದ್ಯಂತ 22ರಿಂದ ಸಮೀಕ್ಷೆ ಪ್ರಾರಂಭವಾಗುತ್ತದೆ. ಅದರಲ್ಲಿಯೂ ನಮ್ಮ ಸಮಾಜದವರು ಕುರುಬ ಎಂದು ಬರೆಸಬೇಕು. ಕುರುಬರಲ್ಲಿ ಸಾಕಷ್ಟು ಜಾತಿಗಳಿವೆ, ಹಾಲುಮತ ಎಂದು ಹೇಳಿಕೊಳ್ಳುವವರು ಕೆಲವರಿದ್ದಾರೆ. ಹಾಲುಮತ ಎಂದರೆ ನಮ್ಮ ವೃತ್ತಿ ಬದಲಾಗುತ್ತದೆಯೇ, ಇಲ್ಲ, ನಾವು ಕುರಿ ಕಾಯುವವರು, ಕುರುಬ ಎಂದು ಬರೆಸಿದರೆ ಸಾಕು. ಈ ಸಮೀಕ್ಷೆ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಸಹಕಾರಿಯಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಗದಗ ಜಿಲ್ಲೆಗೂ ನನಗೂ 42 ವರ್ಷಗಳ ಅವಿನಾಭಾವ ನಂಟಿದೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಗದಗ ಜಿಲ್ಲೆಯ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ನಮ್ಮ ಸಮಾಜದ ಮುಖಂಡ ಫಕೀರಪ್ಪ ಹೆಬಸೂರ ಹಾಗೂ ನಾನು ಹಲವಾರು ವರ್ಷಗಳಿಂದ ಕೂಡಿ ಬೆಳೆದು ಬಂದವರು. ಅವರ ಸಮಾಜಮುಖಿ ಕಾರ್ಯಗುರುತಿಸಿ ಅಭಿನಂದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
