ನಿಷೇಧವಿದ್ದರೂ ಆಫ್ರಿಕನ್ ಕ್ಯಾಟ್‌ಫಿಶ್ ಸಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದರು.
ವಿಧಾನ ಪರಿಷತ್ತು (ಆ.14): ನಿಷೇಧವಿದ್ದರೂ ಆಫ್ರಿಕನ್ ಕ್ಯಾಟ್‌ಫಿಶ್ ಸಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದರು. ಶೂನ್ಯವೇಳೆಯಲ್ಲಿ ಕ್ಯಾಟ್‌ಫಿಶ್ ಸಾಕಣಿ ಕುರಿತು ತಿಪ್ಪಣ್ಣಪ್ಪ ಕಮಕನೂರ ಪ್ರಸ್ತಾವಿಸಿದರು. ಇದಕ್ಕೆ ಉತ್ತರಿಸಿದ ಮೀನುಗಾರಿಕೆ ಸಚಿವರು, ಕ್ಯಾಟ್‌ಫಿಶ್ ಸಾಕಣಿಕೆ 2013ರಲ್ಲೇ ನಿಷೇಧಿಸಲಾಗಿದೆ. ಈ ಮೀನು ಆರೋಗ್ಯಕ್ಕೆ ಹಾನಿಕಾರಕ. ಕೆರೆ ಅಥವಾ ಹೊಂಡಗಳಲ್ಲಿ ಈ ಮೀನು ಸಾಕಲು ಹೊರಟರೆ, ಬೇರೆ ಯಾವುದೇ ತಳಿಯ ಮೀನುಗಳನ್ನು ಬೆಳೆಯಲು ಇದು ಬಿಡುವುದಿಲ್ಲ ಎಂದರು.
ಈವರೆಗೂ ಎಲ್ಲೂ ಕ್ಯಾಟ್‌ಫಿಶ್ ಸಾಕಣಿಕೆ ಮತ್ತು ಸರಬರಾಜಿಗೆ ಅವಕಾಶ ಕೊಟ್ಟಿಲ್ಲ. ಸಾಕಣಿಕೆ ಮತ್ತು ವ್ಯಾಪಾರವನ್ನೂ ನಿಷೇಧಿಸಲಾಗಿದೆ. ಅದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ತಹಸೀಲ್ದಾರ್, ಗ್ರಾಮೀಣಾಭಿವೃದ್ಧಿ ಅಧಿಕಾರಿ, ಪೊಲೀಸ್ ಇನ್ಸ್‌ಪೆಕ್ಟರ್, ಮೀನುಗಾರಿಕೆ ಇಲಾಖೆ ನಿರ್ದೇಶಕರು ಸಮಿತಿಯಲ್ಲಿದ್ದಾರೆ. ಎಲ್ಲಿಯಾದರೂ ಕ್ಯಾಟ್‌ಫಿಶ್ ಸಾಕಣಿಕೆ, ಮಾರಾಟ, ಸಾಗಣಿಕೆ ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನಾ ಮಾತನಾಡಿದ ಬಿಜೆಪಿ ಸದಸ್ಯ ತಿಪ್ಪಣ್ಣ ಕಮಕನೂರು, ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಕ್ಯಾನ್ಸರ್ ಬರಲು ಕಾರಣವಾಗುವ ಆಫ್ರಿಕನ್ ಕ್ಯಾಟ್‌ಫಿಶ್‌ಗಳನ್ನು ಬೆಂಗಳೂರು, ಹೊಸಕೋಟೆ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಣಿಕೆ ಮಾಡಲಾಗುತ್ತಿದೆ. ಲೋಡ್‌ಗಟ್ಟಲೆ ಆಂಧ್ರಪ್ರದೇಶ, ಮುಂಬೈ, ದೆಹಲಿ, ಪಂಜಾಬ್ ಸೇರಿ ದೊಡ್ಡ ನಗರಗಳಿಗೆ ರವಾನೆ ಮಾಡಲಾಗುತ್ತಿದೆ. ನಿಷೇಧಿತ ಕ್ಯಾಟ್‌ಫಿಶ್ ಸಾಕಣಿಕೆ, ಸಾಗಣಿಕೆ ಮತ್ತು ಮಾರಾಟದ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪರಿಹಾರಕ್ಕೆ ಹಣದ ಕೊರತೆಯಿಲ್ಲ: ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಗೆ ಪರಿಹಾರ ನೀಡಲು ಹಣ ಲಭ್ಯವಿದ್ದು, ಸಂಪೂರ್ಣ ಮನೆ ಹಾನಿಯಾದರೆ ತಕ್ಷಣ 1.20 ಲಕ್ಷ ಹಾಗೂ ದೇವರಾಜು ಅರಸು ನಿಗಮದಿಂದ ಜಿಲ್ಲಾಧಿಕಾರಿ ಮೂಲಕ ಗ್ರಾಮೀಣ ಭಾಗಗಳಿಗೆ 1.50 ಲಕ್ಷ ಹಾಗೂ ನಗರ ಭಾಗಗಳಿಗೆ 2.25 ಲಕ್ಷ ನೂತನ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಭಾಗಶಃ ಹಾನಿಯಾದರೆ 50 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯ ಕರಾವಳಿ ಭಾಗದಲ್ಲಿ ಗಾಳಿ-ಮಳೆಯ ಆರ್ಭಟದಿಂದ ಹಾನಿಯಾಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದರ ಮೂಲಕ ಅವರಿಗೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗುತ್ತಿದೆ. ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದ್ದಲ್ಲಿ ತಕ್ಷಣ ಪರಿಹಾರ ನೀಡಲು ತಹಸೀಲ್ದಾರ ಖಾತೆಯಲ್ಲಿ 50 ಲಕ್ಷ, ಜಿಲ್ಲಾಧಿಕಾರಿ ಖಾತೆಯಲ್ಲಿ 4 ಕೋಟಿ ಹಣ ಇದೆ.
ಹಣದ ಕೊರತೆಯಿಲ್ಲ. ಅತಿಕ್ರಮಣದಾರರಿಗೂ ಪರಿಹಾರ ನೀಡುತ್ತೇವೆ. ಅವರಿಗೆ ಹೊಸ ಮನೆ ನಿರ್ಮಾಣಕ್ಕೆ ಅವಕಾಶವಿಲ್ಲ. ಅದನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತೇವೆ ಎಂದರು. ಅರಣ್ಯ ಪ್ರದೇಶದಲ್ಲಿ ಜಾನುವಾರುಗಳು ಮೇಯುವುದಕ್ಕೆ ಯಾರೂ ತೊಂದರೆ ನೀಡುವುದಿಲ್ಲ. ಶಿರಸಿ-ಹಾವೇರಿ, ಶಿರಸಿ-ಕುಮಟಾ, ಹುಬ್ಬಳ್ಳಿ-ಯಲ್ಲಾಪುರ ಹೆದ್ದಾರಿಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ಭಟ್ಕಳದಿಂದ ಗೋವಾವರೆಗೆ ಹಾದುಹೋದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಹಲವಾರು ಸಭೆ ನಡೆಸಿ, ಎಚ್ಚರಿಕೆ ನೀಡಿ, ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಿದರೂ ಯಾರ ಮಾತು ಕೇಳುತ್ತಿಲ್ಲ. ರಾಜ್ಯ ಸರ್ಕಾರವು ರಾಜ್ಯ ಹೆದ್ದಾರಿ ನಿರ್ವಹಣೆಗೆ ಅನುದಾನ ನೀಡಿದೆ. ಮಳೆಗಾಲ ಮುಗಿದ ಬಳಿಕ ಅನುದಾನ ಮಂಜೂರಿಗೊಳಿಸಿ ಹೊಸ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.