ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜಾತಿ ಜನಗಣತಿ ಕ್ರಮವು ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳನ್ನು ಪೂರೈಸುವುದರಲ್ಲದೆ, ಸಮಾಜದಲ್ಲಿ ಭಿನ್ನತೆ ಉಂಟುಮಾಡಲು ಕಾರಣವಾಗಲಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಕಾರ್ಕಳ (ಅ.02): ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜಾತಿ ಜನಗಣತಿ ಕ್ರಮವು ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳನ್ನು ಪೂರೈಸುವುದರಲ್ಲದೆ, ಸಮಾಜದಲ್ಲಿ ಭಿನ್ನತೆ ಉಂಟುಮಾಡಲು ಕಾರಣವಾಗಲಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. "ಈ ಜನಗಣತಿ ವೈಜ್ಞಾನಿಕವಾಗಿಲ್ಲ, ಪಾರದರ್ಶಕತೆಯಿಲ್ಲ. ಸರಿಯಾದ ಸಮಯದಲ್ಲಿ, ಸೂಕ್ತ ಸಿದ್ಧತೆಗಳೊಂದಿಗೆ ಗಣತಿ ನಡೆಸಬಹುದಾಗಿದ್ದರೂ, ತರಾತುರಿಯಲ್ಲಿ ಹಾಗೂ ಹಬ್ಬದ ಸಮಯದಲ್ಲಿ ಈ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ಸರ್ಕಾರದ ನಿಜಸ್ವಭಾವವನ್ನು ಬಹಿರಂಗಪಡಿಸುತ್ತದೆ" ಎಂದು ಅವರು ಹೇಳಿದ್ದಾರೆ.
ನವರಾತ್ರಿ ಹಬ್ಬದ ಪವಿತ್ರ ಕಾಲದಲ್ಲಿ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ಬಲವಂತವಾಗಿ ನಿಯೋಜಿಸಿರುವುದನ್ನು ಖಂಡಿಸಿದ ಅವರು, "ಶಿಕ್ಷಕರ ಧಾರ್ಮಿಕ ಆಚರಣೆಗಳು ಮತ್ತು ಹಬ್ಬದ ಸಂಭ್ರಮವನ್ನು ಕಸಿದುಕೊಂಡು ಆಡಳಿತಾತ್ಮಕ ಒತ್ತಡಕ್ಕೆ ಒಳಪಡಿಸಿರುವುದು ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಈ ಪವಿತ್ರ ಸಮಯವನ್ನು ಗುರಿಯಾಗಿಸಿಕೊಂಡಿದೆ" ಎಂದು ಆರೋಪಿಸಿದರು.
ಸಮೀಕ್ಷೆ ತಪ್ಪಾಗುವ ಸಾಧ್ಯತೆ ಇದೆ
ಅವರು ಮುಂದುವರಿದು – ಗಣತಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ, ಪಾರದರ್ಶಕತೆಯ ಕೊರತೆ ಇದೆ. ಶಿಕ್ಷಕರು ಅಗತ್ಯ ತರಬೇತಿಯನ್ನು ಪಡೆಯದೆ ಈ ಕೆಲಸಕ್ಕೆ ತಳ್ಳಲ್ಪಟ್ಟಿದ್ದಾರೆ. ಅಪರಿಚಿತ ಪ್ರದೇಶಗಳಲ್ಲಿ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಸಮೀಕ್ಷೆ ತಪ್ಪಾಗುವ ಸಾಧ್ಯತೆ ಇದೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಮಾಹಿತಿ ಸಂಗ್ರಹದಲ್ಲಿ ತೊಂದರೆ ಉಂಟಾಗಲಿದೆ. ಹಬ್ಬದ ಒತ್ತಡದಲ್ಲಿ ಸಂಗ್ರಹವಾಗುವ ಮಾಹಿತಿಯ ನಿಖರತೆ ಅನುಮಾನಾಸ್ಪದವಾಗಿದೆ ಎಂದರು.
"ಜಾತಿ ಆಧಾರಿತ ಸಮೀಕ್ಷೆ ಜನರಲ್ಲಿ ವಿಭಜನೆ ಉಂಟುಮಾಡಿ, ಸಮಾಜದ ಸೌಹಾರ್ದತೆಗೆ ಧಕ್ಕೆಯುಂಟುಮಾಡಲಿದೆ. ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ರಾಜಕೀಯಕ್ಕಾಗಿ ಸಮಾಜವನ್ನು ಪ್ರಕ್ಷುಬ್ಧಗೊಳಿಸುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ, ಈ ಅವೈಜ್ಞಾನಿಕ ಮತ್ತು ಅಪೂರ್ಣ ಸಿದ್ಧತೆಗಳೊಂದಿಗೆ ನಡೆಯುತ್ತಿರುವ ಜಾತಿ ಜನಗಣತಿಯನ್ನು ತಕ್ಷಣವೇ ನಿಲ್ಲಿಸಬೇಕು" ಎಂದು ವಿ. ಸುನೀಲ್ ಕುಮಾರ್ ಒತ್ತಾಯಿಸಿದರು.
