ಪ್ರವಾಹ ಪೀಡಿತರ ನೆರವಿಗೆ ಬಾರದೆ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆ ಮಾಡುತ್ತಿದ್ದಾಗ, ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ, ಕೇಂದ್ರ ಸರ್ಕಾರಕ್ಕೆ ನಾವು ಏನು ಹೇಳಬೇಕೋ ಹೇಳುತ್ತೀವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಯಾದಗಿರಿ (ಅ.01): ಅತಿವೃಷ್ಟಿ ಹಾಗೂ ಪ್ರವಾಹದಿಂದ ನಲುಗಿರುವ ಕಲ್ಯಾಣ ಕರ್ನಾಟಕ ಭಾಗದ ರೈತರ ವಿಚಾರದಲ್ಲಿ ಸಿಎಂ ಉದಾಸೀನ ಮಾಡಬಾರದು. ಪ್ರವಾಹ ಪೀಡಿತರ ನೆರವಿಗೆ ಬಾರದೆ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆ ಮಾಡುತ್ತಿದ್ದಾಗ, ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ, ಕೇಂದ್ರ ಸರ್ಕಾರಕ್ಕೆ ನಾವು ಏನು ಹೇಳಬೇಕೋ ಹೇಳುತ್ತೀವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ನೆರೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಲು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಹಿತ ಜಿಲ್ಲೆಗೆ ಆಗಮಿಸಿದ್ದ ಅವರು, ಶಹಾಪುರದಲ್ಲಿ ಬಿಜೆಪಿ ಮುಖಂಡ ಅಮೀನರೆಡ್ಡಿ ಪಾಟೀಲ್‌ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಲಬುರಗಿಗೆ ವಿಶೇಷ ವಿಮಾನದಲ್ಲಿ ಬಂದು ಅಧಿಕಾರಿಗಳ ಜೊತೆ ಸಭೆ ಮಾಡಿ, ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೆ ಸಾಲದು,.ನೆರೆಪೀಡಿತ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಲಿ ಹಾಗೂ ಸಚಿವರು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಲಿ ಎಂದು ವಿಜಯೇಂದ್ರ, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿಗಳೇ ರೈತರ ವಿಚಾರದಲ್ಲಿ ಉದಾಸೀನತೆ ಮಾಡುವುದು ಬೇಡ, ವೈಮಾನಿಕ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ ಅಂತ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ರೈತರು ಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು, ಬೆಳೆಹಾನಿಯಾದ ಪ್ರತಿ ಎಕರೆಗೆ ಕನಿಷ್ಠ 25-30 ಸಾವಿರ ರು. ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದೇ ವಿಶ್ವಕರ್ಮ ಸಮುದಾಯ

ವಿಶ್ವಕರ್ಮ ಸಮಾಜ ಬೇಡುವ ಸಮುದಾಯ ಅಲ್ಲ. ಬದಲಾಗಿ ತಮ್ಮ ಕೌಶಲದಿಂದ .ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದು ವಿಶ್ವಕರ್ಮ ಸಮುದಾಯ ಎಂದು ಹೇಳಿದರು. ಶ್ರೀವಿಶ್ವಕರ್ಮ ಸೇವಾ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿರಾಟ್‌ ವಿಶ್ವಕರ್ಮ ಮಹೋತ್ಸವ, ವಿಶ್ವಕರ್ಮ ಶ್ರೀ ಹಾಗೂ ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಕಣಚಾರಿ ಜಯಂತಿ ಆಚರಣೆ ಆರಂಭಿಸಿದರು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ನೀಡಿದರು ಎಂದರು.

ಪ್ರತಿಪಕ್ಷದ ನಾಯಕ ನಾಯಕ ಆರ್‌. ಅಶೋಕ್‌ ಮಾತನಾಡಿ, ರಸ್ತೆ ಬದಿಯಲ್ಲಿ ಬಿದ್ದಿರುವ ಕಲ್ಲಿಗೆ ರೂಪ ನೀಡಿ ಅದನ್ನು ದೇವರನ್ನಾಗಿಸುವ ಶಕ್ತಿ ವಿಶ್ವಕರ್ಮ ಸಮುದಾಯಕ್ಕೆ ಇದೆ ಎಂದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಬಿ.ಎಂ. ಉಮೇಶ್‌ ಕುಮಾರ್‌ ಮಾತನಾಡಿ, ವಿಶ್ವಕರ್ಮ ಸಮುದಾಯ ಇತಿಹಾಸವನ್ನು ರೂಪಿಸಿದೆ. ವಿಶ್ವಕರ್ಮ ಸಮುದಾಯದ ಸಂಸ್ಕೃತಿಯನ್ನು ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಪ್ರಚಾರ ಮಾಡಬೇಕು ಎಂದರು. ಸಂಸದ ಡಾ.ಸಿ.ಎನ್‌ ಮಂಜುನಾಥ್‌ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಮಾತನಾಡಿದರು.