ನೆರೆಪೀಡಿತ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಲಿ ಹಾಗೂ ಸಚಿವರು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯಾದಗಿರಿ (ಅ.02): ಅತಿವೃಷ್ಟಿ ಹಾಗೂ ಪ್ರವಾಹದಿಂದ ನಲುಗಿರುವ ಕಲ್ಯಾಣ ಕರ್ನಾಟಕ ಭಾಗದ ರೈತರ ವಿಚಾರದಲ್ಲಿ ಸಿಎಂ ಉದಾಸೀನ ಮಾಡಬಾರದು. ಕಲಬುರಗಿಗೆ ವಿಶೇಷ ವಿಮಾನದಲ್ಲಿ ಬಂದು ಅಧಿಕಾರಿಗಳ ಜೊತೆ ಸಭೆ ಮಾಡಿ, ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೆ ಸಾಲದು, ನೆರೆಪೀಡಿತ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಲಿ ಹಾಗೂ ಸಚಿವರು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯಾದಗಿರಿ ಜಿಲ್ಲೆಯ ನೆರೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಲು ವಿಪ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಹಿತ ಜಿಲ್ಲೆಗೆ ಆಗಮಿಸಿದ್ದ ಅವರು, ಶಹಾಪುರದಲ್ಲಿ ಬಿಜೆಪಿ ಮುಖಂಡ ಅಮೀನರೆಡ್ಡಿ ಪಾಟೀಲ್‌ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳೇ ರೈತರ ವಿಚಾರದಲ್ಲಿ ಉದಾಸೀನತೆ ಮಾಡುವುದು ಬೇಡ, ವೈಮಾನಿಕ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ ಅಂತ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ರೈತರು ಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು, ಬೆಳೆಹಾನಿಯಾದ ಪ್ರತಿ ಎಕರೆಗೆ ಕನಿಷ್ಠ ₹25-30 ಸಾವಿರ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.

ನೆನಪು ಆಗುತ್ತಿಲ್ಲವೇ

ಕಲ್ಯಾಣ ಕರ್ನಾಟಕದ ರೈತರು, ಬಡವರ ಬಗ್ಗೆ ಸಚಿವರಿಗೆ ಇಷ್ಟೊಂದು ತಾತ್ಸಾರ ಯಾಕೆ ಎಂದು ಪ್ರಶ್ನಿಸಿದ ಅವರು, ಕೃಷಿ ಹಾಗೂ ಕಂದಾಯ ಸಚಿವರಿಗೆ ಯಾದಗಿರಿ, ಕಲಬುರಗಿ ಜಿಲ್ಲೆ ನೆನಪು ಆಗುತ್ತಿಲ್ಲವೇ ಎಂದು ಟೀಕಿಸಿದರು. ಮಂತ್ರಿಗಳು ಬಂದು ರೈತರಿಗೆ ಧೈರ್ಯ ಹೇಳಬೇಕು, ಕಲ್ಯಾಣ ಕರ್ನಾಟಕ ನೆರೆ ಪೀಡಿತ ಪ್ರದೇಶಕ್ಕೆ ಸಚಿವರು ಭೇಟಿ‌ ನೀಡಬೇಕು, ಆ ಜಿಲ್ಲೆಯ ಉಸ್ತುವಾರಿ ಸಚಿವರು ಸಮಸ್ಯೆಗಳು ಆದ ಕಡೆ ಹೋಗಬೇಕು, ಕಲಬುರಗಿಗೆ ವಿಶೇಷ ವಿಮಾನದಲ್ಲಿ ಬಂದು ಅಧಿಕಾರಿಗಳ ಜೊತೆ ಸಭೆ ನಡೆಸಿ, ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೆ ಸಾಲದು, ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆ ಮಾಡುತ್ತಿದ್ದಾಗ, ವಿಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ, ಕೇಂದ್ರ ಸರ್ಕಾರಕ್ಕೆ ನಾವು ಏನು ಹೇಳಬೇಕೋ ಹೇಳುತ್ತೀವಿ ಎಂದ ಅವರು, ಈ ಹಿಂದೆ 2019ರಲ್ಲಿ ಪ್ರವಾಹ ಬಂದಾಗ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಎಲ್ಲ ಕಡೆ ನೆರೆ ವೀಕ್ಷಣೆ ಮಾಡಿದ್ದರು. ಎಲ್ಲ ಕಡೆ ಭೇಟಿ ನೀಡಿದ್ದರು, ಒಣಭೂಮಿಗೆ ಎನ್ಡಿಆರ್‌ಎಫ್‌ 6 ಸಾವಿರ ರು. ಪರಿಹಾರ ಇದ್ದಾಗ, ಅದನ್ನು ₹ 16 ಸಾವಿರ ರು. ಕೊಡಲಾಯಿತು, ಮನೆ ಕಳೆದುಕೊಂಡಿದ್ದವರಿಗೆ ₹5 ಲಕ್ಷ ರುಗಳ ಘೋಷಣೆ ಮಾಡಿದ್ದರು ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ನರಸಿಂಹ ನಾಯಕ್‌ , ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಅಮೀನರೆಡ್ಡಿ ಪಾಟೀಲ್‌ ಹಾಗೂ ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್‌, ಅಲೆಮಾರಿ ಹಾಗೂ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವಿಂದ್ರನಾಥ್‌ ನಾದ್ ಇದ್ದರು.

ನೆರೆ ವಿಚಾರವಾಗಿ ಬಿಜೆಪಿ ಟೀಕಿಸುತ್ತಿರುವ ಪ್ರಿಯಾಂಕ ಖರ್ಗೆ ಅವರೇ ಎಲ್ಲ ಇಲಾಖೆ ಸಚಿವರಂತೆ ವರ್ತಿಸುತ್ತಾರೆ, ಖರ್ಗೆಯವರೇ, ಮೊದಲು ನಿಮ್ಮ ಸ್ವಕ್ಷೇತ್ರದಲ್ಲಿ ಪರಿಸ್ಥಿತಿ ಏನಾಗಿದೆ ಅಂತ ಒಮ್ಮೆ ನೋಡಿ. ನಂತರ ರಾಜ್ಯ- ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಮಾತಾಡಿ.
- ಬಿ. ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು.