ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ ಇದೇ ತಿಂಗಳ 24ರಂದು ರಾಜ್ಯಾದ್ಯಂತ ರಸ್ತೆತಡೆ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಬೆಂಗಳೂರು (ಸೆ.20): ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ ಇದೇ ತಿಂಗಳ 24ರಂದು ರಾಜ್ಯಾದ್ಯಂತ ರಸ್ತೆತಡೆ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ನಗರದ ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ನಡೆದ ಪಕ್ಷದ ಹಾಲಿ ಶಾಸಕರು-ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳನ್ನು ಒಳಗೊಂಡ ರಾಜಕೀಯ ಚಿಂತನಾ ಶಿಬಿರದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಸ್ತೆ ಗುಂಡಿಗಳ ಬಗ್ಗೆ ಪದೇ ಪದೆ ರಾಜ್ಯ ಸರ್ಕಾರ ಚರ್ಚೆ ಮಾಡುತ್ತಿದೆ ಅಷ್ಟೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಎಷ್ಟಿವೆ ಎಂಬುದನ್ನು ಕಳೆದ ಎರಡೂವರೆ ವರ್ಷಗಳಿಂದ ಎಣಿಸುತ್ತಲೇ ಇದೆ. ಗುಂಡಿಗಳಿಗೆ ಮುಕ್ತಿ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಹರಿಹಾಯ್ದರು. ಹೀಗಾಗಿ, 24ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಂದು ಗಂಟೆ ಕಾಲ ರಸ್ತೆತಡೆ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಭ್ರಷ್ಟಾಚಾರದಲ್ಲಿ ನಿರತ, ಅಭಿವೃದ್ಧಿ ಮರೆತ, ರಸ್ತೆ ಗುಂಡಿ ಮುಚ್ಚದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಸ್ತೆತಡೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ: ಎರಡು ದಿನಗಳ ಕಾಲ ನಡೆದ ಬಿಜೆಪಿಯ ಹಾಲಿ, ಮಾಜಿ ಶಾಸಕರು-ಸಂಸದರನ್ನು ಒಳಗೊಂಡ ರಾಜಕೀಯ ಚಿಂತನ ಶಿಬಿರದಲ್ಲಿ ಕೈಗೊಂಡ ನಿರ್ಣಯಗಳನ್ನು ಬಹುವಾಗಿ ಮೆಚ್ಚಿಕೊಂಡ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಎಲ್ಲರನ್ನೂ ಎದ್ದು ನಿಲ್ಲಿಸಿ ಚಪ್ಪಾಳೆ ಹಾಕಿಸಿದ ಪ್ರಸಂಗ ನಡೆಯಿತು.
ಯಲಹಂಕದ ರೆಸಾರ್ಟ್‌ವೊಂದರಲ್ಲಿ ನಡೆದ ಚಿಂತನ ಶಿಬಿರ ಎರಡನೆಯ ದಿನವಾದ ಶುಕ್ರವಾರ ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಲು ಹೊರಟಿರುವ ಸಾಮಾಜಿಕ ಸಮೀಕ್ಷೆ (ಜಾತಿಗಣತಿಯ) ಮೂಲಕ ಜಾತಿಗಳನ್ನು ಒಡೆಯುವ ಹುನ್ನಾರವನ್ನು ಬಯಲಿಗೆಳೆಯಬೇಕು ಹಾಗೂ ಎಲ್ಲಾ ಜಾತಿಗಳೂ ಧರ್ಮದ ಕಾಲಂನಲ್ಲಿ ‘ಹಿಂದು’ ಎಂದು ನಮೂದಿಸಲು ಮೂಡಿಸಬೇಕು ಎಂಬ ಒಂದು ನಿರ್ಣಯ ಹಾಗೂ ಜಿಎಸ್‌ಟಿ ಇಳಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿ ಮತ್ತೊಂದು ನಿರ್ಣಯ ಕೈಗೊಳ್ಳಲಾಯಿತು.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂತೋಷ್ ಅವರು ತಮ್ಮ ಭಾಷಣದಲ್ಲಿ ಈ ನಿರ್ಣಯಗಳನ್ನು ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕಾಗಿ ಪಕ್ಷ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಎಂದು ಹೇಳಿದರು. ಸಭೆಯಲ್ಲಿದ್ದ ಎಲ್ಲ ಮುಖಂಡರೂ ಎದ್ದು ನಿಂತು ಭಾರಿ ಕರತಾಡನ ಮೂಲಕ ವಿಜಯೇಂದ್ರ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಕಿವಿಹಿಂಡಿದ ಸಂತೋಷ್
ಬಳಿಕ ಮಾತು ಮುಂದುವರೆಸಿದ ಸಂತೋಷ್, ನೀವೆಲ್ಲ ಮುಖಂಡರು ಸುಮ್ಮನಿದ್ದರೆ ನಮ್ಮ ಸರ್ಕಾರ ಬರುತ್ತದೆಯೇ? ಸುಮ್ಮನಿದ್ದರೂ ಸರ್ಕಾರ ಬರಬಹುದು. ಆದರೆ ಈಗಿರುವ ರೀತಿ ನೀವೆಲ್ಲ ಇದ್ದರೆ ಸರ್ಕಾರ ಬರುವುದಿಲ್ಲ ಎಂದು ಪರೋಕ್ಷವಾಗಿ ಚಾಟಿ ಬೀಸಿದರು.
