ಮೆಟ್ರೋ ಯೋಜನೆಯ ಭೂಸ್ವಾಧೀನನಕ್ಕೆ ರಾಜ್ಯ ಸರ್ಕಾರವೇ ಹಣ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಶೇ.50 ರಷ್ಟು ನೀಡಬೇಕಾಗಿತ್ತು. ಅದನ್ನೂ ನೀಡಿಲ್ಲ. ರಾಜ್ಯದ ಜನರ ಹಿತಕ್ಕಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು (ಆ.11): ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ.80 ರಷ್ಟು ಖರ್ಚು ಮಾಡಿದ್ದರೆ, ಕೇಂದ್ರ ಬಿಜೆಪಿ ಸರ್ಕಾರ ಶೇ.20ರಷ್ಟು ಮಾತ್ರ ವೆಚ್ಚ ಮಾಡಿದೆ. ಇನ್ನು ಕೆಲ ಕಡೆ ಖರ್ಚು ಮಾಡಿದ್ದು ಶೇ.11 ರಷ್ಟು ಮಾತ್ರ. ಕೇಂದ್ರ ಸರ್ಕಾರವು ರಾಜ್ಯವನ್ನು ನಿರ್ಲಕ್ಷಿಸಿದ್ದರೂ ಪ್ರಧಾನಿಗಳಿಗೆ ಗೌರವ ನೀಡಿ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಹಳದಿ ಮಾರ್ಗದ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಮೆಟ್ರೋ ಯೋಜನೆಯ ಭೂಸ್ವಾಧೀನನಕ್ಕೆ ರಾಜ್ಯ ಸರ್ಕಾರವೇ ಹಣ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಶೇ.50 ರಷ್ಟು ನೀಡಬೇಕಾಗಿತ್ತು. ಅದನ್ನೂ ನೀಡಿಲ್ಲ. ರಾಜ್ಯದ ಜನರ ಹಿತಕ್ಕಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರು ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ನಗರವಾದರೂ ಸಿಗುತ್ತಿರುವ ಅನುದಾನ ಮಾತ್ರ ಬಹಳ ಕಡಿಮೆಯಾಗಿದೆ. ಅಹಮದಾಬಾದ್ ಗೆ ಶೇ.20 ರಷ್ಟು ತೆರಿಗೆ ಪಾಲು ನೀಡಲಾಗಿದೆ. ನಮಗೆ ಶೇ10 ರಷ್ಟು ಮಾತ್ರ ನೀಡಲಾಗಿದೆ. ಅದಕ್ಕೆ ದೇಶದ ಇತರೆ ದೊಡ್ಡ ನಗರಗಳಂತೆ ನಮ್ಮನ್ನೂ ಪರಿಗಣಿಸಿ ಬೆಂಗಳೂರಿಗೆ ಕನಿಷ್ಠ 1 ಲಕ್ಷ ಕೋಟಿ ರು. ಅನುದಾನ ನೀಡಬೇಕೆಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ದೇಶದ ರಾಜಧಾನಿ ಸಾಲಿನಲ್ಲಿಟ್ಟು ಬೆಂಗಳೂರನ್ನು ಯೋಚಿಸಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ, ಬದಲಾಗಿ ಮನವಿ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಸಂಸದರು 10 ರು. ತಂದಿಲ್ಲ: ಬಿಜೆಪಿ ಸಂಸದರು, ಮುಖಂಡರು ಎಲ್ಲಾ ನಾವೇ ಮಾಡಿದ್ದೇವೆ ಎನ್ನುತ್ತಾರೆ. ಅವರದ್ದು ಏನೇನೂ ಸಾಧನೆಯಿಲ್ಲ. ಯಾವೊಬ್ಬ ಸಂಸದನೂ ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಹತ್ತು ರುಪಾಯಿ ಸಹಾಯ ತಂದಿಲ್ಲ. ಯಾವ ರೀತಿಯ ಸಹಕಾರವನ್ನೂ ಕೊಟ್ಟಿಲ್ಲ. ರಾಜ್ಯದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು. ಕೇಂದ್ರ ಜಲಶಕ್ತಿ ಸಚಿವರು ಮಾತ್ರ ಕೆಲವೊಮ್ಮೆ ನಮ್ಮ ಮನವಿಗಳಿಗೆ ಸ್ಪಂದಿಸಿದ್ದಾರೆ. ನರೇಗಾ ಯೋಜನೆಗೂ ಹಣ ನೀಡಿಲ್ಲ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು, ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಸಾಧನೆ ಎಂದು ಅಂದುಕೊಂಡಿದ್ದಾರೆ. ರಾಜಕಾರಣ ಬಿಟ್ಟು ಜನರ ಸೇವೆಗೆ ಅನುದಾನ ತರುವ ಕೆಲಸ ಮಾಡಿ ಎಂದು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ರಾಜ್ಯದ ನಿರ್ಲಕ್ಷ್ಯ: ಕೇಂದ್ರ ಸರ್ಕಾರವು ರಾಜ್ಯವನ್ನು ನಿರ್ಲಕ್ಷಿಸಿದ್ದು, ಪ್ರಧಾನಿಗಳಿಗೆ ಗೌರವ ನೀಡಿ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ. ಡಬಲ್ ಡೆಕ್ಕರ್ ಎನ್ನುವ ಮಾದರಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಐಟಿ ಕ್ಷೇತ್ರದಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಐಟಿ ಉದ್ದಿಮೆಗಳು ಇರುವ ಭಾಗಕ್ಕೆ ಅನುಕೂಲವಾಗಲಿ ಎಂದು ಹಳದಿ ಮಾರ್ಗ ಮಾಡಿದ್ದೇವೆ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಕೂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಆಗಿದ್ದು ಎಂದರು.
ಅಂಕಿ-ಅಂಶಗಳ ಬಿಡುಗಡೆಗೆ ಸವಾಲು: ಮೆಟ್ರೋ ಎರಡನೇ ಹಾಗೂ ಮೂರನೇ ಹಂತಕ್ಕೆ ಪ್ರಧಾನಿ ಮೋದಿ ಕೊಡುಗೆ ಹೆಚ್ಚಿದೆ ಎನ್ನುವ ಬಿಜೆಪಿ ನಾಯಕರು, ಅಂಕಿ ಅಂಶ ಬಿಡುಗಡೆ ಮಾಡಲಿ, ನಾನು ಸಹ ಬಿಡುಗಡೆ ಮಾಡುತ್ತೇನೆ ಎಂದು ಇದೇ ವೇಳೆ ಶಿವಕುಮಾರ್ ಸವಾಲು ಹಾಕಿದರು.
