ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರು ಈ ಯೋಜನೆಯ ಪರವಾಗಿದ್ದು, ಇದಕ್ಕೆ ಅಧಿಸೂಚನೆ ಹೊರಡಿಸಲೇಬೇಕು ಎಂದು ಸಂಬಂಧಪಟ್ಟ ರಾಜ್ಯಗಳ ಸಭೆ ನಡೆಸಲು ಎರಡು ಬಾರಿ ಪ್ರಯತ್ನಿಸಿದರು.
ವಿಧಾನ ಪರಿಷತ್ತು (ಆ.22): ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆಯನ್ನು ಒಮ್ಮೆ ಆಂಧ್ರಪ್ರದೇಶ, ಮತ್ತೊಮ್ಮೆ ಮಹಾರಾಷ್ಟ್ರದವರು ಕೇಂದ್ರದ ಮೇಲೆ ಒತ್ತಡ ತಂದು ನಿಲ್ಲಿಸಿದರು ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿಚಾರವಾಗಿ ಶುಕ್ರವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರು ಈ ಯೋಜನೆಯ ಪರವಾಗಿದ್ದು, ಇದಕ್ಕೆ ಅಧಿಸೂಚನೆ ಹೊರಡಿಸಲೇಬೇಕು ಎಂದು ಸಂಬಂಧಪಟ್ಟ ರಾಜ್ಯಗಳ ಸಭೆ ನಡೆಸಲು ಎರಡು ಬಾರಿ ಪ್ರಯತ್ನಿಸಿದರು. ಆದರೆ ಎರಡು ರಾಜ್ಯದವರು ದೂರವಾಣಿ ಕರೆ ಮಾಡಿ ನಿಲ್ಲಿಸಿದರು. ಕೇಂದ್ರ ಸಚಿವರನ್ನು ನಾನು, ಮುಖ್ಯಮಂತ್ರಿಯವರು ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು ಎಂದರು. ಈ ಯೋಜನೆಗೆ ₹2 ಲಕ್ಷ ಕೋಟಿ ಬೇಕಾಗುತ್ತದೆ. ಇದು ಸಾಧ್ಯವಾಗುತ್ತದೆಯೇ? ಇದಕ್ಕೆ ಏನಾದರೊಂದು ಪರಿಹಾರ ಕಂಡುಹಿಡಿಯಲು ಒಂದು ಹಂತಕ್ಕೆ ಬಂದಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು ಅಲ್ಲಿನ ರೈತರನ್ನು ಒಪ್ಪಿಸಿದರೆ ಸರ್ಕಾರ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
2 ಲಕ್ಷ ಕೋಟಿ ಬೇಕು: ಸುಪ್ರೀಂ ಕೊರ್ಟಿನಿಂದ ಎಕರೆಗೆ 8- 10 ಕೋಟಿ ರು. ಪರಿಹಾರ ನೀಡಿ ಎಂದು ಆದೇಶವಾಗಿದೆ. ಇಷ್ಟು ಪರಿಹಾರ ಮೊತ್ತ ಬೆಂಗಳೂರಿನಲ್ಲಿಯೇ ಇಲ್ಲ. ಸ್ವಾಧೀನ ಭೂಮಿಗೆ ನ್ಯಾಯಾಲಯಗಳಲ್ಲಿ ಆದ ಹೆಚ್ಚುವರಿ ಪರಿಹಾರದ ಸರಾಸರಿಯಂತೆ ಪರಿಗಣಿಸಿದರೆ ಯೋಜನೆ (3) ಜಾರಿಗೆ 2 ಲಕ್ಷ ಕೋಟಿ ರು. ಬೇಕಾಗುತ್ತದೆ. ಇದು ಸಾಧ್ಯವಾಗುತ್ತದೆಯೇ? ಇದಕ್ಕಾಗಿ ಕಂದಾಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಭೂಮಿ ಹಸ್ತಾಂತರ ಕುರಿತ ವಿಚಾರವನ್ನು ಸಚಿವ ಸಂಪುಟದ ಮುಂದಿಡಲಾಗಿದೆ.
ಈ ಯೋಜನೆ ವಿಚಾರದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ. ಭೂಮಿ ಪರಿಹಾರ ವಿಚಾರದಲ್ಲಿ ವಕೀಲರು ಹಣ ಮಾಡುತ್ತಿದ್ದಾರೆಯೇ ವಿನಃ ರೈತರಿಗೆ ಪರಿಹಾರ ದೊರೆಯುವುದಿಲ್ಲ. ಆದ ಕಾರಣ ಪರಿಷತ್ ಸದಸ್ಯರಾದ ಪೂಜಾರ್ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಅಲ್ಲಿನ ರೈತರನ್ನು ಸಮಾಧಾನ ಪಡಿಸಿದರೆ ಹದಿನೈದು ದಿನಗಳಲ್ಲಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
