ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಮಹೇಶ್ ಶೆಟ್ಟಿ ತಿಮ್ಮರೋಡಿಗೆ ಉಡುಪಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಂಧನ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂದು ವಕೀಲರು ವಾದ ಮಂಡಿಸಿದರು.
ಉಡುಪಿ/ದಕ್ಷಿಣ ಕನ್ನಡ (ಆ.23): ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ನೀಡಿದರೂ, ಪೊಲೀಸ್ ಠಾಣೆಗೆ ಹಾಜರಾಗದ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಬ್ರಹ್ಮಾವರ ಠಾಣೆ ಪೊಲೀಸರು ಬಂಧನ ಮಾಡಿದ್ದರು. ಆದರೆ, ಈ ಬಗ್ಗೆ ಎರಡು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಇಂದು ಉಡುಪಿ ಜಿಲ್ಲಾ ನಗ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದಕ್ಕೂ ಮುನ್ನ ಉಡುಪಿ ನ್ಯಾಯಾಲಯದಲ್ಲಿ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಪರ ವಾದ ಮಂಡಿಸಿದ ವಕೀಲರು, ಬಂಧಿಸಿದ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ. ಪ್ರಥಮ ನೋಟಿಸ್ ನೀಡಿ ಅದರ ಅವಧಿ ಮುಗಿಯುವ ಮುನ್ನವೇ ಎರಡನೇ ನೋಟಿಸ್ ನೀಡಿದ್ದಾರೆ. ತಿಮರೋಡಿಯವರ ಹೇಳಿಕೆಯಿಂದ ಯಾವುದೇ ಕೋಮು ಗಲಭೆಗಳು ಆಗಿಲ್ಲ. ತಿಮರೋಡಿ ಕೂಡ ಓರ್ವ ಹಿಂದೂ ನಾಯಕ. ಇನ್ನೊಂದು ಧರ್ಮವನ್ನು ಅವರು ದೂಷಿಸಿಲ್ಲ. ಸೌಜನ್ಯ ಪ್ರಕರಣ ಆನೆಮಾವುತ ಪ್ರಕರಣ ಉಲ್ಲೇಖಿಸಿದ ವಕೀಲರು. ಈ ವೇಳೆ ಪ್ರತಿವಾದಿಗಳಿಂದ ಆಕ್ಷೇಪ ಮಾಡಲಾಯಿತು. ಆದರೆ, ವಾದ ವಿವಾದ ಆಲಿಸಿದ ನ್ಯಾಯಾಧೀಶರು ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಆ.21ರಂದು ಜಾಮೀನು ತಿರಸ್ಕರಿಸಿದ್ದ ನ್ಯಾಯಾಲಯ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಆ.21ರಂದು ಬ್ರಹ್ಮಾವರ ಪೊಲೀಸರು ಬಂಧಿಸಿದ್ದರು. ಇದಾದ ನಂತರ ಮಹೇಶ ಶೆಟ್ಟಿ ತಿಮರೋಡಿ ಅವರು ಜಾಮೀನು ಮಂಜೂರಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಅದೇ ದಿನ ಆ.21ರಂದು ವಿಚಾರಣೆ ಮಾಡಿದ್ದ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿ ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇಂದು ಪುನಃ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 2 ಗಂಟೆಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರ ವಿಚಾರಣೆಗೆ ಒಪ್ಪಿಸಿ ಕಾಲಾವಕಾಶ ನೀಡಿತ್ತು. ಪೊಲೀಸರು ವಿಚಾರಣೆ ನಡೆಸಿದ ನಂತರ ಪುನಃ ಕೋರ್ಟ್ ಮುಂದೆ ಹಾಜರುಪಡಿಸಿದಾಗ ಎರಡೂ ಕಡೆ ವಕೀಲರ ವಾದ ಆಲಿಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
