'ಕಾಂತಾರ 1' ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು, ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹಾಸನ (ಅ.20): ಕಾಂತಾರ ಚಾಪ್ಟರ್-1 ಸಿನಿಮಾ ಯಶಸ್ಸಿನ ಬೆನ್ನಲ್ಲಿಯೇ ಹಾಸನಾಂಬ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ನಟ ರಿಷಬ್ ಶೆಟ್ಟಿ ಅವರು ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಹಿರಿಯ ನಟ ಶಿವರಾಜ್‌ಕುಮಾರ್ ಅಲ್ಲಿಗೆ ಬಂದರು. ಆಗ ಅವರನ್ನು ಭೇಟಿಯಾದ ರಿಷಬ್ ಶೆಟ್ಟಿ ಅವರು ಶಿವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಕೂಡ ಮನಸ್ಫೂರ್ತಿ ಆಶೀರ್ವಾದ ಮಾಡಿ ತಮ್ಮೊಂದಿಗೆ ಬಂದಿದ್ದ ಪತ್ನ ಗೀತಾ ಅವರಿಗೂ ತೋರಿಸಿ ಹಾರೈಸಿದರು. ನಂತರ ರಿಷಭ್ ಶೆಟ್ಟಿಯನ್ನು ಶಿವಣ್ಣ ಎರಡು ಬಾರಿ ಅಪ್ಪುಗೆ ಮಾಡಿ, ಇನ್ನೂ ಯಶಸ್ಸು ಸಿಗಲಿ ಎಂದು ಶುಭ ಹಾರೈಕೆ ತಿಳಿಸಿದರು. 

'ಕಾಂತಾರ 1' ಚಿತ್ರದ ಅಭೂತಪೂರ್ವ ಯಶಸ್ಸಿನ ಸಂಭ್ರಮದಲ್ಲಿರುವ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) (ಅಕ್ಟೋಬರ್ 19, 2025) ಕುಟುಂಬ ಸಮೇತರಾಗಿ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ನಡೆದ ಸನ್ನಿವೇಶವು ಕನ್ನಡ ಚಿತ್ರರಂಗದ ಹಿರಿಯರಿಗೆ ಹಾಗೂ ಸಂಸ್ಕೃತಿಗೆ ಗೌರವ ಸಲ್ಲಿಸುವ ಪರಂಪರೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಇನ್ನು ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ರಿಷಬ್ ಶೆಟ್ಟಿ ಅವರಿಗೆ ಕಾಂತಾರದ ಸಕ್ಸಸ್ ನೆತ್ತಿಗೇರಿಲ್ಲ. ಅವರು ಎಷ್ಟೇ ಯಶಸ್ಸು ಗಳಿಸಿದರೂ ಹಿರಿಯರನ್ನು ಗೌರವಿಸುವುದನ್ನು ಮರೆಯುವುದಿಲ್ಲ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ರಿಷಬ್ ಅವರ ಈ ನಡೆಗೆ ನೆಟ್ಟಿಗರು ಮತ್ತು ಅಭಿಮಾನಿಗಳು ಮನಸೋತಿದ್ದು, ಈ ಗೌರವಯುತ ಸಂಸ್ಕೃತಿಯನ್ನು ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.

ದೈವದ ಬಲದಲ್ಲಿ ರಿಷಬ್ ಶೆಟ್ಟಿ ನಂಬಿಕೆ:

'ಕಾಂತಾರ ಚಾಪ್ಟರ್ 1' (Kantara Chapter 1) ಸಿನಿಮಾ ಜಗತ್ತಿನೆಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದ ಯಶಸ್ಸಿನಲ್ಲಿ ದೇವರು ಮತ್ತು ದೈವಗಳ ಬಲವಾದ ಆಶೀರ್ವಾದವಿದೆ ಎಂದು ಬಲವಾಗಿ ನಂಬಿರುವ ರಿಷಬ್ ಶೆಟ್ಟಿಯವರು, ಸಿನಿಮಾ ಬಿಡುಗಡೆಯಾದಾಗಿನಿಂದಲೂ ಭಾರತದ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದ ರಿಷಬ್, ಇದಕ್ಕೂ ಮುನ್ನ ಬಿಹಾರದ ಮುಂಡೇಶ್ವರಿ ದೇವಸ್ಥಾನ, ಕಾಶಿ ವಿಶ್ವನಾಥ ದೇವಾಲಯ ಮತ್ತು ರಾಮೇಶ್ವರ ಸೇರಿದಂತೆ ದೇಶದ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಈ ಯಶಸ್ಸಿನ ಪಯಣದ ಭಾಗವಾಗಿ ಅವರು ಇಂದು 12ನೇ ಶತಮಾನದಲ್ಲಿ ನಿರ್ಮಿಸಲಾದ ಪುರಾತನ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಕಲೆಕ್ಷನ್‌ನಲ್ಲಿ ಭಾರಿ ನಾಗಾಲೋಟ:

ಸದ್ಯ 'ಕಾಂತಾರ 1' ಸಿನಿಮಾ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ರೂ. 717.50 ಕೋಟಿ ಗಳಿಕೆ ಮಾಡಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಕೇವಲ 15 ದಿನಕ್ಕೆ ಈ ಬೃಹತ್ ಗಳಿಕೆ ಮಾಡಿರುವುದು ಈ ವರ್ಷದ ಅತೀ ದೊಡ್ಡ ಚಿತ್ರಗಳ ಪೈಕಿ ಎರಡನೇ ಸ್ಥಾನಕ್ಕೇರಲು ಕಾರಣವಾಗಿದೆ. ಚಿತ್ರದ ಗಳಿಕೆ ಇದೇ ರೀತಿ ಮುಂದುವರಿದರೆ, ಕನ್ನಡದ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರವಾದ 'ಕೆಜಿಎಫ್ 2' ಗಳಿಕೆಯನ್ನೂ ಮೀರಿ 'ನಂಬರ್ ಒನ್' ಸ್ಥಾನದಲ್ಲಿ ಕುಳಿತುಕೊಳ್ಳುವ ಎಲ್ಲ ಸಾಧ್ಯತೆ ಇದೆ.

ಸದ್ಯ ತಮ್ಮ ಸಿನಿಮಾದ ಅಮೋಘ ವಿಜಯದ ಸಂಭ್ರಮವನ್ನು ದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸುತ್ತಿರುವ ರಿಷಬ್ ಶೆಟ್ಟಿ, ಕನ್ನಡ ಸಿನಿಮಾ ಕಾಂತಾರ ಚಾಪ್ಟರ್ 1 ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಮತ್ತು ಕರ್ನಾಟಕದ ಕೀರ್ತಿಪತಾಕೆಯನ್ನು ಹಾರಿಸಿ ಮೆರೆಯುತ್ತಿದ್ದಾರೆ. ಇನ್ನೂ ಸಿನಿಮಾ ಮತ್ತಷ್ಟು ಹಣವನ್ನು ಗಳಿಸಲಿ ಎಂದು ಅಭಿಮಾನಿಗಳು ಹಾಗೂ ಚಿತ್ರರಂಗದ ಎಲ್ಲ ಹಿರಿಯರು ಹಾರೈಸುತ್ತಿದ್ದಾರೆ.

View post on Instagram