ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಅನ್ನೋ ಹೇಳಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮೈಸೂರು ಮಹಾರಾಜ, ಸಂಸದ ಯುದುವೀರ್‌ಗೆ ಇತಿಹಾಸವೇ ಗೊತ್ತಿಲ್ಲ ಎಂದಿದ್ದಾರೆ. ಡಿಕೆಶಿ ಹೇಳಿಕೆ ಮತ್ತೆ ವಿವಾದ ಹೆಚ್ಚಿಸಿದೆ.
ಬೆಂಗಳೂರು (ಆ.27) ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಅನ್ನೋ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಬಿಜೆಪಿ ನಾಯಕರು ಡಿಕೆ ಶಿವಕಮಾರ್ ಹೇಳಿಕೆಯನ್ನು ಖಂಡಿಸಿದ್ದಾರೆ. ಇತ್ತ ಮೈಸೂರು ಮಹಾರಾಜ, ಬಿಜೆಪಿ ಸಂಸದ ಯುದುವೀರ್ ಒಡೆಯರ್ ಕೂಡ ಡಿಕೆಶಿ ಹೇಳಿಕೆಯನ್ನು ಖಂಡಿಸಿದ್ದಾರೆ. ವಿವಾದದ ಬಳಿಕ ಡಿಕೆ ಶಿವಕುಮಾರ್ ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಇಷ್ಟೇ ಅಲ್ಲ ಮೈಸೂರು ಇತಿಹಾಸದ ಬಗ್ಗೆ ಮೈಸೂರು ಮಹಾರಾಜ ಯದುವೀರ್‌ಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯದುವೀರ್‌ಗೆ ಇತಿಹಾಸ ಗೊತ್ತಿಲ್ಲ
ಯುದವೀರ್ ಬಿಜೆಪಿ ಸೇರಿಕೊಂಡಿದ್ದಾರೆ. ಯದುವೀರ್ ಇತಿಹಾಸ ಮರೆತಿದ್ದಾರೆ. ಅವರು ಬಿಜೆಪಿ ಒಲೈಕೆ ಮಾಡಲಿ. ನಾನು ಯಾರನ್ನೂ ಒಲೆೈಕೆ ಮಾಡುತ್ತಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಪ್ರಾರ್ಥನೆ ನಮ್ಮ ಸ್ವತ್ತು ಅಲ್ಲ. ನಮ್ಮ ಮನೆ ನಮ್ಮ ಸ್ವತ್ತು ಎಂದು ಡಿಕೆ ಶಿವಕುಮಾರ್, ಯುದವೀರ್‌ಗೆ ಚಾಮುಂಡೇಶ್ವರಿ ಹಾಗೂ ಮೈಸೂರಿನ ಕುರಿತು ಪಾಠ ಮಾಡಿದ್ದಾರೆ.
ಹಿಂದಿನ ರಾಜ ವಂಶಸ್ಥರು ಮತ್ತು ನಮ್ಮ ಸರ್ಕಾರ ಎರಡು ಸೇರಿ ಇದನ್ನ ನಾಡ ದೇವತೆ ಅಂತ ಕರೆದಿದ್ದಾರೆ. ನಾವು ಕೂಡಾ ನಾಡ ದೇವತೆ ಅಂತ ಕರೆದಿದ್ದೇವೆ. ಚಾಮುಂಡೇಶ್ವರಿ ಸರ್ಕಾರದ ಆಸ್ತಿ. ಎಲ್ಲೂ ಕೂಡಾ ಹಿಂದೂ ಧರ್ಮದಲ್ಲಿ, ರಾಜ ವಂಶಸ್ಥರಲ್ಲಿ ಇದೂ ಹಿಂದುಗಳಿಗೆ ಮಾತ್ರ, ಹಿಂದೂಗಳು ಮಾತ್ರ ದೇವಸ್ಥಾನಕ್ಕೆ ಬರಬೇಕು ಅಂತ ಹೇಳಿಲ್ಲ. ಚಾಮುಂಡೇಶ್ವರಿ ಎಲ್ಲಾ ಧರ್ಮಗಳಿಗೂ ಆಶೀರ್ವಾದ ಮಾಡೋಕೆ ಇರೋ ದೇವಿ. ಬರೀ ಹಿಂದುಗಳು ಬರಬೇಕು, ಬೇರೆ ಅವರು ಬರಬಾರದು ಅಂತ ಎಲ್ಲಿ ಹೇಳಿದ್ದಾರೆ. ಬೇಕಾದಷ್ಟು ಜನ ಬೌದ್ಧ ಧರ್ಮಕ್ಕೆ ಸೇರಿಕೊಂಡಿದ್ದಾರೆ. ಅವರು ಯಾರು ಬರೋದು ಬೇಡವಾ? ಕೆಲವರು ಕ್ರಿಶ್ಚಿಯನ್ ಗೆ ಸೇರಿಕೊಂಡಿದ್ದಾರೆ. ಕೆಲವರು ಮುಸ್ಲಿಂಮರು ಆಗಿದ್ದಾರೆ. ಎಲ್ಲರು ಬರ್ತಾರೆ. ತಂದೆ-ತಾಯಿ ಬೇರೆ ಧರ್ಮ ಇರುತ್ತಾರೆ. ಅವರ ಆಚರಣೆ ಅವರ ವಿಚಾರ. ಇದು ನಾಡು, ಕರ್ನಾಟಕ ರಾಜ್ಯ. ಕರ್ನಾಟಕ ರಾಜ್ಯದ ದೇವತೆ ಅಂತ ನಾವು ಪದ್ದತಿ ಇಟ್ಕೊಂಡು ಇದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಸೀದಿಗೆ ನಮ್ಮನ್ನು ಬಿಡುತ್ತಾರೆ
ಮಹರಾಜರು ವಿದೇಶದವರನ್ನ ಕರೆಯುತ್ತಿದ್ದರು. ಅವರು ಎಲ್ಲರು ಪ್ರಾರ್ಥನೆ ಮಾಡ್ತಾರೆ. ನಿಸಾರ್ ಅಹಮದ್ ಅವರಿಂದ ನಾವು ಉದ್ಘಾಟನೆ ಮಾಡಿಸಿದ್ದಿವೇ. ಶೋಭಾ ಕರಂದ್ಲಾಜೆ ಅವರು ಚಾಮುಂಡೇಶ್ವರಿ ಬೆಟ್ಟಕ್ಕೆ ಬಿಡಬಾರದು ಅಂತಾರೆ. ಅದು ಹೇಗೆ ಸಾಧ್ಯ?
ದಸರಾ ನಮ್ಮ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಅನೇಕ ಪದ್ದತಿಯಿಂದ ಆಚರಣೆ ಮಾಡುತ್ತಿದ್ದೇವೆ. ನೀರಿಗೆ, ಸೂರಿಗೆ ಯಾವುದೇ ದೇವರು ಇರಬಹುದು. ಚರ್ಚ್, ಮಸೀದಿಗೆ ನಮ್ಮನ್ನ ಬಿಡುತ್ತಾರೆ, ಜೈನರ ಪೀಠಕ್ಕೆ ಬಿಡುತ್ತಾರೆ, ಅವರು ಹಿಂದೂಗಳು ಬರಬಾರದು ಅಂತಾ ಹೇಳುತ್ತಿದ್ದಾರಾ? ಚಾಮುಂಡೇಶ್ವರಿ ಸರ್ಕಾರಿ ಆಸ್ತಿ ಇದು, ಖಾಸಗಿ ಆಸ್ತಿಯಲ್ಲ ಎಂದುಡ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗ್ಯಾರೆಂಟಿ ಎಲ್ಲರಿಗೂ ಕೊಟ್ಟಿದ್ದೇವೆ
ನಾನು ಒಬ್ಬ ಹಿಂದೂ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನನಗೆ ಚಾಮುಂಡೇಶ್ವರಿ ಬಗ್ಗೆ ಅಪಾರವಾದ ವಿಶ್ವಾಸ ಇದೆ. ತಾಯಿಗೆ ಹೋಗಿ 2 ಸಾವಿರ ಹಣ ಇಟ್ಟು ನಾನು ಸಿದ್ದರಾಮಯ್ಯ ಪ್ರಾರ್ಥನೆ ಮಾಡಿಕೊಂಡಿದ್ದೇವು. ಎಲ್ಲರಿಗೂ ಕೊಡೋ ಶಕ್ತಿ ಕೊಡು ಅಂತ ಕೇಳಿಕೊಂಡಿದ್ದೆವು. ಅ ದೇವಿ ಆಶೀರ್ವಾದ ಮಾಡಿದ್ದರು. ನಾವು ಬರೀ ಹಿಂದೂಗಳಿಗೆ ಗ್ಯಾರಂಟಿ ಕೊಡ್ತಿದ್ದೇವಾ? ಕ್ರಿಶ್ಚಿಯನ್, ಮುಸ್ಲಿಂಮರು, ಸಿಖ್ ಎಲ್ಲರಿಗೂ ಕೊಡ್ತಿದ್ದೇವೆ. ರಾಷ್ಟ್ರಧ್ವಜ, ನಾಡಧ್ವಜ, ಕರ್ನಾಟಕದ ಧ್ವಜ ಇವಕೆಲ್ಲಾ ಜಾತಿ ಧರ್ಮ ಬಣ್ಣ ಕಟ್ಟೋದ್ರಲ್ಲಿ ಅರ್ಥವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬ್ಯಾರಿಗಳು ನಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತಾರೆ
ಬ್ಯಾರಿಗಳು ನಮಗಿಂತ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಅವರು ಮುಸ್ಲಿಂಮರು ಅಂತ ತಳ್ಳೋಕೆ ಆಗುತ್ತಾ? ಮೆಕ್ಕಾ ಮದೀನ ಬಿಟ್ಟರೆ ಬೇರೆ ಕಡೆ ಹಿಂದೂಗಳು ಬರಬಾರದು ಅಂತ ಹೇಳಿಲ್ಲ. ಯಾವ ಚರ್ಚ್‌ನಲ್ಲಿ, ಗುರುದ್ವಾರದಲ್ಲಿ ಬರಬೇಡಿ ಅಂತ ಹೇಳಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
