ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.22):  ಹಣಕಾಸಿನ ವಿಚಾರಕ್ಕೆ ಸ್ನೇಹಿತರಿಂದಲೇ ಸಹೋದರನ ಮಗ ಕೊಲೆಯಾದ ವಿಷಯ ಕೇಳಿ ಚಿಕ್ಕಪ್ಪನೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಬಳಿ ನಡೆದಿದೆ. ಕಳೆದ ರಾತ್ರಿ ಮನೆಯಲ್ಲಿದ್ದ 30 ವರ್ಷದ ಓಂಕಾರ್ ಎಂಬುವನನ್ನ ಸ್ನೇಹಿತರೇ ಕರೆದೊಯ್ದು ನಗರದ ಎಪಿಎಂಸಿ ಯಾರ್ಡ್ ನಲ್ಲಿ ಕೊಲೆ ಮಾಡಿದ್ದರು. ವಿಷಯ ಕೇಳುತ್ತಿದ್ದಂತೆ ಮೃತ ಓಂಕಾರನ ಚಿಕ್ಕಪ್ಪ 55 ವರ್ಷದ ಪ್ರಕಾಶ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ಸಹೋದರ ಮಗನ ಸಾವಿನ ಸುದ್ದಿ ಕೇಳಿ ಪ್ರಕಾಶ್ ಸಾವು

ಒಟ್ಟಿಗೆ ಓದಿ-ಬೆಳೆದು, ವ್ಯವಹಾರ ಮಾಡುತ್ತಿದ್ದ ಸುನೀಲ್, ಜೀವನ್, ಧನಪಾಲ್ ಎಂಬ ಸ್ನೇಹಿತರಿಂದಲೇ ಓಂಕಾರ್ ಕೊಲೆಯಾಗಿದ್ದಾನೆ. ಎಲ್ಲರೂ ಒಟ್ಟಿಗೆ ಸೇರಿ ಕಳೆದ ಮೂರು ವರ್ಷದ ಹಿಂದೆ ಒಂದು ಫೈನಾನ್ಸ್ ಕಚೇರಿ ತೆರೆದಿದ್ದರು. ಆದರೆ, ಈ ನಾಲ್ವರು ಸ್ನೇಹಿತರು ನಡೆಸುತ್ತಿದ್ದ ವ್ಯವಹಾರ ಯಾಕೋ ಸರಿ ಬಂದಿಲ್ಲ. ಹೀಗಾಗಿ ಉಳಿದ ಮೂವರು, ಓಂಕಾರ್ ಜೊತೆ ಹಣದ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಬರೀ ಕ್ಯಾತೆ ತೆಗೆದಿದ್ರೆ ಹೋಗ್ಲಿ ಬಿಡಿ ಅನ್ಬೋದಿತ್ತು. ಈ ಕಿರಿಕ್ ಇದೀಗ ಓಂಕಾರ್ ಪ್ರಾಣವನ್ನೇ ಬಲಿ ಪಡೆದಿದೆ. ನಿನ್ನೆ ರಾತ್ರಿ ಮನೆಯಲ್ಲಿ ಊಟಕ್ಕೆ ಕೂತಿದ್ದ ಓಂಕಾರ್ನನ್ನ ಮಾತಾಡಬೇಕು ಎಂದು ಸ್ನೇಹಿತ ಸುನೀಲ್ ಕರೆದೊಯ್ದಿದ್ದಾನೆ. ಮನೆಯಿಂದ ಎಪಿಎಂಸಿ ಮಾರ್ಕೆಟ್ ಬಳಿ ಕರೆದೊಯ್ದು, ಉಳಿದ ಇಬ್ಬರು ಸ್ನೇಹಿತರ ಜೊತೆ ಸೇರಿ ಕಲ್ಲಿನಿಂದ ಜಜ್ಜಿ, ದೊಣ್ಣೆಯಿಂದ ಹೊಡೆದು ಬಾಲ್ಯ ಸ್ನೇಹಿತರೇ ಓಂಕಾರ್ನನ್ನ ಮುಗಿಸಿದ್ದಾರೆ. ಮೊದಲು ಯಾರೋ ಕೊಲೆ ಮಾಡಿದ್ದಾರೆ ಅಂತಾ ಕಥೆ ಕಟ್ಟಲು ಶುರುಮಾಡಿದ ಒಂಕಾರ್ ಸ್ನೇಹಿತರ ಹತ್ತಿರ ತರೀಕೆರೆ ಪೊಲೀಸರು ಸತ್ಯ ಕಕ್ಕಿಸಿದ್ದಾರೆ. ಖಾಕಿ ಟ್ರೀಟ್ಮೆಂಟ್ ಕೊಡುತ್ತಲೇ ನಾವೇ ಕೊಲೆ ಮಾಡಿದ್ದು ಅನ್ನೋದನ್ನ ಈ ಕಿರಾತರಕು ಒಪ್ಪಿಕೊಂಡಿದ್ದಾರೆ. ಇನ್ನು ತಮ್ಮನ ಮಗನ ಸಾವನ್ನ ಕೇಳಿದ ಓಂಕಾರ್ ದೊಡ್ಡಪ್ಪ ಪ್ರಕಾಶ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಕ್ಕಪಕ್ಕದ ಮನೆಯಲ್ಲಿ ಎರಡು ಮೃತದೇಹಗಳನ್ನ ಇಟ್ಟು ಸಂಬಂಧಿಕರು ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. 

ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿಗೆ ಜನರ ಬಲಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಒಂದೇ ಮನೆಯಲ್ಲಿ ಇಬ್ಬರು ಸಾವು 

ಸೂರ್ಯ ಹುಟ್ಟಿ-ಮುಳುಗುವಷ್ಟರಲ್ಲಿ ಒಂದೇ ಮನೆಯಲ್ಲಿ ಇಬ್ಬರು ಸಾವನ್ನಪ್ಪಿರೋದ್ರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಕುಟುಂಬದ ಅಕ್ಕಪಕ್ಕದ ಮನೆಯಲ್ಲಿ ಎರಡು ಶವಗಳಿದ್ದು ಮನೆಯವರ ಜೊತೆ ಬೀದಿಯ ಜನ ಕೂಡ ಕಣ್ಣೀರಿಟ್ಟಿದ್ದಾರೆ. ಒಟ್ಟಾರೆ ಎರಡು ತಿಂಗಳ ಮಗುವನ್ನ ಇಟ್ಕೊಂಡು ನಂಗೆ ನನ್ನ ಗಂಡ ಬೇಕು ಅಂತ ರೋಧಿಸುತ್ತಿದ್ದ ಓಂಕಾರ್ ಪತ್ನಿಯ ಸ್ಥಿತಿ ಕರುಳ ಕಿತ್ತು ಬರುವಂತಿತ್ತು. ಓಂಕಾರ್ ಗೆ  ಇಬ್ಬರು ಮಕ್ಕಳಿದ್ದು, ದೊಡ್ಡ ಮಗು 2 ವರ್ಷದ್ದು. ಎರಡನೇ ಮಗು ಎರಡು ತಿಂಗಳದ್ದು. ಪುಟ್ಟ-ಪುಟ್ಟ ಮಕ್ಕಳನ್ನ ಬಿಟ್ಟು ಓಂಕಾರ್ ಇಹಲೋಕ ತ್ಯಜಿಸಿರೋದು ಇಡೀ ಕುಟುಂಬವನ್ನೇ ಕಂಗಾಲಾಗುವಂತೆ ಮಾಡಿದೆ. ಅದೇನೆ ಇದ್ರು, ಒಂದು ಸಾವಿನ ದುಃಖದ ಅಘಾತದಲ್ಲಿದ್ದವರಿಗೆ ಮತ್ತೊಂದು ಸಾವು ಬರಸಿಡಿಲು ಬಡಿಯುವಂತೆ ಮಾಡಿರೋದು ನಿಜಕ್ಕೂ ದುರಂತವೇ ಸರಿ.