ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಸೆ.15):  ನನ್ನ ವಿರುದ್ಧದ ಭೂ ಕಬಳಿಕೆ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜಕೀಯಕ್ಕಾಗಿ ನಾವುಗಳು ಮಾತನಾಡಿರುವುದಾಗಿ ನನ್ನ ಹತ್ತಿರ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಾಂಖ್ಯೀಕ ಮತ್ತು ಯೋಜನೆ ಇಲಾಖೆ ಸಚಿವ ಡಿ.ಸುಧಾಕರ್ ಹೇಳಿದ್ದಾರೆ. 

ಇಂದು(ಶುಕ್ರವಾರ) ನಗರದ ತ ರಾ ಸು ರಂಗಮಂದಿರದಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಭೂ ಕಬಳಿಕೆ ಪ್ರಕರಣ ಸಂಬಂಧ ಈ ವರೆಗೆ ನನಗೆ ಪೊಲೀಸ್ ಇಲಾಖೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ನಾನು ಈ ನೆಲದ ಕಾನೂನನನ್ನು ಗೌರವಿಸುತ್ತಿರುವುದರಿಂದ ಪೊಲೀಸರ ನೋಟಿಸ್ ಬಂದರೆ ಉತ್ತರ ನೀಡುತ್ತೇನೆ ಎಂದರು.

ದಲಿತರ ಭೂಮಿ ಕಬಳಿಕೆ ವಿವಾದ: ಸಚಿವ ಸುಧಾಕರ್‌ ಬೆನ್ನಿಗೆ ನಿಂತ ಸರ್ಕಾರ!

ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಮೊಸರಲ್ಲಿ ಕಲ್ಲು ಹುಡುಕಿದರೆ ಯಶಸ್ವಿ ಆಗುತ್ತಾರಾ? ಸತ್ಯ ಯಾವತ್ತಿದ್ದರೂ ಗೆಲ್ಲಲೇಬೇಕು. ಸತ್ಯಾಂಶ ತಿಳಿಯದೆ, ದಾಖಲೆ ನೋಡದೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್ ನ ಕೆಲ ಸ್ನೇಹಿತರ ಜೊತೆ ನಾನು ವೈಯಕ್ತಿಕವಾಗಿ ಮಾತಾಡಿದ್ದೆನೆ. ಈ ಪ್ರಕರಣದಲ್ಲಿ ಸುಧಾಕರ್ ತಪ್ಪೇನಿಲ್ಲ ಎಂದು ಗೊತ್ತಿದೆ. ಆದರೂ ರಾಜಕೀಯಕ್ಕಾಗಿ ನಾವುಗಳು ಮಾತನಾಡಿರುವುದಾಗಿ ನನ್ನ ಹತ್ತಿರ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. 

ನಮ್ಮ ದೇಶದ ಪ್ರಜಾಪ್ರಭುತ್ವ ಶಕ್ತಿಯುತವಾಗಿದೆ, ತಪ್ಪು ಮಾಡಿದರೆ ಒಂದು ಕ್ಷಣ ಇರಲಾಗುವುದಿಲ್ಲ. ಎಷ್ಟೋ ಜನ ಅಪರಾಧಿಗಳು ತಪ್ಪಿಸುಕೊಳ್ಳಲಿ, ಆದರೆ ಓರ್ವ ನಿರಪರಾಧಿಗೆ ಶಿಕ್ಷೆ ಆಗಬಾರದು. ಅರವತ್ತು ವರ್ಷಗಳಿಂದ ನನ್ನ ಜೀವನವನ್ನು ಜನ ಗಮನಿಸಿದ್ದಾರೆ. ಒಳ್ಳೆಯ ವ್ಯಕ್ತಿ ಎಂಬ ಕಾರಣಕ್ಕೆ ನಾಲ್ಕು ಬಾರೀ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. 

ದಲಿತರ ಭೂಮಿ ಕಬಳಿಕೆ ವಿವಾದ; ಡಿ.ಸುಧಾಕರ್ ಸಮರ್ಥಿಸಿಕೊಂಡ ಡಿಕೆಶಿ!

ಅಲ್ಪ ಸಂಖ್ಯಾತನಾಗಿದ್ದರೂ ಪ್ರಾಮಾಣಿಕತೆ ಸೇವೆ ಗುರುತಿಸಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವ ಆಗಿದ್ದೆನು. ಆಗ ಸಿಬಿಐ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಬಿಜೆಪಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿತ್ತಾ? ಕೇವಲ ರಾಜಕಾರಣಕ್ಕಾಗಿ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು. 

ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ನಾನು ಪಾರದರ್ಶಕವಾಗಿದ್ದೇನೆ, ನನಗೆ ಭಯವೇಕೆ? ಎಂದು ಪ್ರಶ್ನಿಸಿದ ಅವರು, ಇಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ದರ್ಶನ ಮಾಡಿ, ಬರಗಾಲ ತೊಲಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಸಚಿವರು ತಿಳಿಸಿದರು.