Silent Killer Snake : ವಿಷಕಾರಿ ಹಾವು ಕಚ್ಚಿದ್ರೆ ಬದುಕೋದು ಕಷ್ಟ. ಅದ್ರಲ್ಲೂ ಕಿಂಗ್ ಕೋಬ್ರಾಗಿಂತ ವಿಷಕಾರಿ ಹಾವೊಂದು ಈಗ ಪತ್ತೆಯಾಗಿದೆ. ಸೈಲೆಂಟ್ ಆಗಿ ದಾಳಿ ನಡೆಸುವ ಅದು ಕಚ್ಚಿದ ಕೆಲವೇ ನಿಮಿಷದಲ್ಲಿ ಮನುಷ್ಯ ಸಾಯ್ತಾನೆ. 

ಹಾವು (Snake) ಓಡಾಡ್ತಿದೆ ಅನ್ನೋ ಸುಳಿವು ಸಿಕ್ಕಾಗ ಮೈ ಎಲ್ಲ ಕಣ್ಣು ಮಾಡ್ಕೊಂಡು ಓಡಾಡ್ಬಹುದು. ಅದೇ ರಾತ್ರಿ ನಾವು ಸುಖ ನಿದ್ರೆಯಲ್ಲಿದ್ದಾಗ ಹಾವು ಕಚ್ಚಿದ್ರೆ? ಈ ಸೈಲೆಂಟ್ ಕಿಲ್ಲರ್ (silent killer) ಹಾವಿನ ಸ್ವಭಾವನೇ ಅದು. ರಾತ್ರಿಯೇ ಅದು ಮನುಷ್ಯರ ಮೇಲೆ ದಾಳಿ ನಡೆಸುತ್ತೆ. ಈ ಹಾವು ಕಚ್ಚಿದ 90 ನಿಮಿಷದಲ್ಲಿ ಮನುಷ್ಯ ಯಮಲೋಕ ಸೇರೋದು ಬಹುತೇಕ ಖಚಿತ. ಕಿಂಗ್ ಕೋಬ್ರಾಗಿಂತ ಹೆಚ್ಚು ಡೇಂಜರ್ ಈ ಹಾವು ಈಗ ಉತ್ತರ ಪ್ರದೇಶದಲ್ಲಿ ಕಾಣಿಸ್ಕೊಂಡಿದೆ.

ದುಧ್ವಾ ರಾಷ್ಟ್ರೀಯ ಉದ್ಯಾನವನ (Dudhwa National Park)ದ ಪಕ್ಕದಲ್ಲಿರುವ ಪಲಿಯಾಕಲನ್ನ ಫುಲ್ವಾರಿಯಾ ಗ್ರಾಮದಲ್ಲಿ ಈ ಅಪರೂಪದ ಹಾವು ಪತ್ತೆಯಾಗಿದೆ. ಅದನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಈ ಹಾವು ಕ್ರೈಟ್ ಜಾತಿಗೆ ಸೇರಿದ ಹಾವಾಗಿದೆ. ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ವಿಷಕಾರಿ ಹಾವು.

ದುಧ್ವಾ ಪಾರ್ಕ್ ನೌಕರರ ಪ್ರಕಾರ, ಈ ಹಾವು ರಾತ್ರಿ ಕಚ್ಚೋದ್ರಿಂದ ಅದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತೆ. ಈ ಹಾವು ಕಚ್ಚಿದ್ರೆ ಯಾವುದೇ ನೋವು ಕಾಣಿಸಿಕೊಳ್ಳೋದಿಲ್ಲ. ಆದ್ರೆ ಬೇರೆ ಲಕ್ಷಣಗಳಿಂದ ಈ ಹಾವಿನ ಕಡಿತ ಪತ್ತೆ ಮಾಡ್ಬಹುದು. ಇದು ರಾತ್ರಿ ಪ್ರಾಣಿ. ಇಲಿ ಮತ್ತು ಕಪ್ಪೆ ಇದ್ರ ಆಹಾರ. ಈ ಹಾವು ಕಚ್ಚಿದ ತಕ್ಷಣ ಚಿಕಿತ್ಸೆ ಅಗತ್ಯ. ನಿರ್ಲಕ್ಷ್ಯ ಮಾಡಿದ್ರೆ ವಿಷ ಏರಿ, ವ್ಯಕ್ತಿ 90 ನಿಮಿಷಗಳಲ್ಲಿ ಸಾಯುವ ಸಾಧ್ಯತೆ ಇದೆ.

ಕ್ರೈಟ್ ಹಾವಿನ ವಿಷ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಈ ಹಾವಿನ ಕಡಿತಕ್ಕೆ ಒಳಗಾದ ವ್ಯಕ್ತಿಗೆ ಪಾರ್ಶ್ವವಾಯು ಮತ್ತು ಉಸಿರಾಟದ ಸಮಸ್ಯೆ ಕಾಡುವ ಸಾಧ್ಯತೆ ಇದೆ.

ಈ ಲಕ್ಷಣ ಕಾಣಿಸಿದ್ರೆ ನಿರ್ಲಕ್ಷ್ಯ ಬೇಡ : ಕ್ರೈಟ್ ಹಾವು ಕಚ್ಚಿದ್ರೆ ಕಚ್ಚಿದ ಜಾಗದಲ್ಲಿ ನೋವಾಗುವುದಿಲ್ಲ. ಹಾಗೆಯೇ ಯಾವುದೇ ಗಾಯ ಕಾಣಿಸೋದಿಲ್ಲ. ಲಕ್ಷಣಗಳು ಹಾವು ಕಚ್ಚಿದ ಕೆಲ ನಿಮಿಷಗಳ ನಂತ್ರ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು, ವಾಂತಿ, ಸ್ನಾಯು ಸೆಳೆತ, ಪಾರ್ಶ್ವವಾಯು ಮತ್ತು ಉಸಿರಾಟದ ತೊಂದ್ರೆ ವಿಷ ಏರಿದ್ರ ಲಕ್ಷಣವಾಗಿದೆ. ಈ ಹಾವು ಕಚ್ಚಿದ್ರೆ ಬದುಕೋದು ಬಹಳ ಅಪರೂಪ. ಒಂದ್ವೇಳೆ ಬದುಕಿದ್ರೂ ಮೂಳೆ ಮತ್ತು ಮಾಂಸ ಕೊಳೆಯುತ್ತೆ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಸುಮಾರು 345 ಜಾತಿಯ ಹಾವುಗಳಿವೆ. ಅದ್ರಲ್ಲಿ ಕ್ರೈಟ್ ಅತ್ಯಂತ ವಿಷಕಾರಿ ಹಾವಾಗಿದೆ. ಈ ಹಾವು ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ನಿದ್ರೆಗೆ ಜಾರುವ ಇದು ಬೇಸಿಗೆ, ಮಳೆಗಾಲ ಶುರು ಆಗ್ತಿದ್ದಂತೆ ರಾತ್ರಿ ಬಿಲದಿಂದ ಎದ್ದು ಬೇಟೆ ಶುರು ಮಾಡುತ್ತದೆ.

ಹೇಗೆ ಬೇಟೆಯಾಡುತ್ತೆ ಹಾವು : ಈ ಹಾವು ರಾತ್ರಿ ಮನುಷ್ಯನ ಮನೆಗಳನ್ನು ಪ್ರವೇಶಿಸುತ್ತದೆ. ಅದು ಶೀತರಕ್ತವನ್ನು ಹೊಂದಿದೆ. ಉಷ್ಣತೆಗಾಗಿ ಮಲಗಿರುವ ಮಾನವನ ದೇಹವನ್ನು ಸುತ್ತಿಕೊಳ್ಳುತ್ತದೆ. ಈ ಮೂಲಕ ತನ್ನ ದೇಹವನ್ನು ಉಷ್ಣಗೊಳಿಸಲು ಪ್ರಯತ್ನಿಸುತ್ತದೆ. ಇದೇ ಸಮಯದಲ್ಲಿ ಅದು ಮನುಷ್ಯನಿಗೆ ಕಚ್ಚುವ ಅಪಾಯ ಹೆಚ್ಚು. ಬೇಸಿಗೆಯಲ್ಲಿ ತೆರೆದ ಪ್ರದೇಶದಲ್ಲಿ ಮಲಗದಂತೆ ತಜ್ಞರು ಸಲಹೆ ನೀಡ್ತಾರೆ. ಮನೆಯಿಂದ ಹೊರಗೆ ಮಲಗುವ ವ್ಯಕ್ತಿಗಳು ಸೊಳ್ಳೆ ಪರದೆ ಬಳಸುವುದು ಸೂಕ್ತ ಎಂದು ತಜ್ಞರು ಹೇಳಿದ್ದಾರೆ. ಛತ್ತೀಸ್ಗಢದಲ್ಲಿ ಈ ಸೈಲೆಂಟ್ ಕಿಲ್ಲರ್ ಹಾವು ಇಬ್ಬರು ಮಹಿಳೆಯರ ಪ್ರಾಣ ತೆಗೆದಿದೆ ಎಂಬ ಸುದ್ದಿ ಇದೆ.