ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ ಅವರ ವೈವಾಹಿಕ ವಿವಾದದಲ್ಲಿ ಹೊಸ ತಿರುವು ಉಂಟಾಗಿದೆ. ಪತ್ನಿ ಗಾಯತ್ರಿ, ತಮ್ಮ ತಾಯಿಯ ಆರೋಪಗಳಿಗೆ ಪ್ರತಿಯಾಗಿ ಆಡಿಯೋ ಬಿಡುಗಡೆ ಮಾಡಿದ್ದು, ತನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಮತ್ತು ಯಾರ ಮಾತನ್ನೂ ಕೇಳಬೇಡಿ ಎಂದು ತಾಯಿಗೆ ಸ್ಪಷ್ಟಪಡಿಸಿದ್ದಾರೆ.

ಧಾರವಾಡ (ಸೆ.2): ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಕಾಮಿಡಿ ಯೂಟ್ಯೂಬರ್ ಮುಕಳೆಪ್ಪ ಅವರ ವೈವಾಹಿಕ ಜೀವನದ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಮುಕಳೆಪ್ಪ ಅಲಿಯಾಸ್ ಖ್ವಾಜಾ ಅನ್ಯ ಧರ್ಮದ (ಹಿಂದು) ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಮುಕಳೆಪ್ಪ ವಿರುದ್ಧ ಅವರ ಪತ್ನಿ ಗಾಯತ್ರಿ ಅವರ ತಾಯಿ ದೂರು ದಾಖಲಿಸಿದ್ದರು. ಈ ಆರೋಪಗಳಿಗೆ ಸಂಬಂಧಿಸಿ, ಮುಕಳೆಪ್ಪ ಪತ್ನಿ ಗಾಯತ್ರಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ತಮ್ಮ ತಾಯಿಗೆ ನೀವು ಹೇಳಿಕೊಡುವವರ ಮಾತು ಕೇಳಬೇಡ ಎಂಬ ಸಂದೇಶ ರವಾನಿಸಿದ್ದಾರೆ.

ಸದ್ಯ ವೈರಲ್ ಆಗಿರುವ ಆಡಿಯೋದಲ್ಲಿ ಗಾಯತ್ರಿ ತಮ್ಮ ತಾಯಿಯೊಂದಿಗೆ ಮಾತನಾಡಿರುವುದು ಬಹಿರಂಗವಾಗಿದೆ. ತಾಯಿ 'ನಿನ್ನ ಗಂಡ ನಿನಗೆ ಮದುವೆಯಾದ ಮೇಲೆ ಏನು ಕೊಟ್ಟಿದ್ದಾನೆ?' ಎಂದು ಕೇಳಿದ್ದಾರೆ. ಇದಕ್ಕೆ ಗಾಯತ್ರಿ, ನನ್ನ ಗಂಡ ನನಗೆ ಚಿನ್ನದ ಸರ ಮಾಡಿಸಿದ್ದಾನೆ ಎಂದು ಉತ್ತರಿಸಿದ್ದಾರೆ.

ನೀನು ನನ್ನ ಬಗ್ಗೆ ಯಾರ ಮಾತು ಕೇಳಬೇಡ:

ತಾಯಿಗೆ ಯಾರೋ ಬಂದು, 'ಮುಕಳೆಪ್ಪನ ಮಾನ ಹರಾಜು ಮಾಡು' ಎಂದು ಹೇಳಿ ಕಲಿಸಿಕೊಡುತ್ತಿದ್ದಾರೆಂದು ಗಾಯತ್ರಿ ಆರೋಪಿಸಿದ್ದಾರೆ. ಜೊತೆಗೆ, 'ನೀನು ನನ್ನ ಬಗ್ಗೆ ಯಾರ ಮಾತು ಕೇಳಬೇಡ. ನಾನು ಚೆನ್ನಾಗಿದ್ದೇನೆ, ನನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, 'ನೀನು ಮಾಮನ ಮನೆಗೆ ಹೋಗು' ಎಂದು ಗಾಯತ್ರಿ ತಮ್ಮ ತಾಯಿಗೆ ಹೇಳಿರುವುದು ಆಡಿಯೋದಲ್ಲಿ ಕೇಳಿಬಂದಿದೆ.

ಯಾರದೇ ಮಾತುಗಳಿಗೆ ಕಿವಿಗೊಡದೆ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತೆಗೆದುಕೊಂಡಿರುವ ಗಾಯತ್ರಿ, ತಾಯಿಯ ಆರೋಪಗಳಿಗೆ ಮತ್ತು ಪ್ರಚೋದನೆಗಳಿಗೆ ಸೊಪ್ಪು ಹಾಕಿಲ್ಲ. ಈ ಪ್ರಕರಣದಲ್ಲಿ 'ಲವ್ ಜಿಹಾದ್' ಆರೋಪಗಳು ಕೇಳಿಬಂದಿದ್ದರೂ, ಗಾಯತ್ರಿ ತಮ್ಮ ಪತಿ ಮುಕಳೆಪ್ಪ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಆಡಿಯೋ ವಿಡಿಯೋವು ವಿವಾದಕ್ಕೆ ಮತ್ತೊಂದು ಹೊಸ ಆಯಾಮವನ್ನು ಸೇರಿಸಿದೆ.

View post on Instagram