ತುಮಕೂರು ಜಿಲ್ಲೆಯಲ್ಲಿ ಅತಿವೇಗದ ಚಾಲನೆ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆದಿದ್ದು, ನಂತರ ಆತನ ಸಹೋದರನಿಗೆ ಚಾಕುವಿನಿಂದ ಇರಿಯಲಾಗಿದೆ. ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತುಮಕೂರು (ಆ.23): ಅತಿ ವೇಗದ ಚಾಲನೆಯನ್ನು ಪ್ರಶ್ನಿಸಿದ್ದಕ್ಕೆ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ನಂತರ ಆತನ ಸಹೋದರನಿಗೆ ಚಾಕುವಿನಿಂದ ಇರಿದ ಘಟನೆ ತುಮಕೂರು ಜಿಲ್ಲೆಯ ಮಿಡಿಗೇಶಿ ಠಾಣಾ ವ್ಯಾಪ್ತಿಯ ಕೆ.ಕೆ. ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ದರ್ಶನ್ ಎಂಬಾತ ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿದ್ದಾಗ, ನೇರಳೆ ಗ್ರಾಮದ ಬಳಿ ಅನುಕುಮಾರ್ ಎಂಬ ಯುವಕ ನಿಧಾನವಾಗಿ ಹೋಗುವಂತೆ ಸೂಚಿಸಿದ್ದಾನೆ. ಈ ವಿಚಾರಕ್ಕೆ ಮಾತಿನ ಚಕಮಕಿ ನಡೆದು ದರ್ಶನ್ ಅನುಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.
ರಾತ್ರಿ ವೇಳೆ ಈ ಹಲ್ಲೆಯನ್ನು ಪ್ರಶ್ನಿಸಲು ಅನುಕುಮಾರ್ ಸಹೋದರ ಜಗದೀಶ್ ತೆರಳಿದ್ದಾನೆ. ಇದರಿಂದ ಕುಪಿತಗೊಂಡ ದರ್ಶನ್, ಜಗದೀಶ್‌ಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ಗಾಯಾಳು ಜಗದೀಶ್ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದರ್ಶನ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಕಳೆದ ತಿಂಗಳೂರು ಇದೇ ತುಮಕೂರಿನ ಕೊರಟಗೆರೆಯಲ್ಲಿ ಅಕ್ಕಿ ಸಾಗಿಸುತ್ತಿದ್ದ ಟ್ರಕ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಮಲ್ಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿತ್ತು. ಮಹಾರಾಷ್ಟ್ರದ ನಾಗ್‌ಪುರದಿಂದ ಕೇರಳಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ತಮಿಳುನಾಡಿನ ಮೂಲದ ಟ್ರಕ್ ಎಂದು ತಿಳಿದುಬಂದಿದೆ. ವಾಹನದಲ್ಲಿ 25 ಟನ್ ಅಕ್ಕಿಯಿದ್ದವು. ಕೇರಳಕ್ಕೆ ಸಾಗಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ಚಾಲಕ ಅಬಿದ್ ಮತ್ತು ಆಶೀದ್ ಈ ದುರ್ಘಟನೆಯಿಂದ ಪಾರಾಗಿದ್ದು, ನಿದ್ದೆ ಮಂಪರಿನಿಂದ ಈ ಘಟನೆ ನಡೆದಿತ್ತು.

