ದಕ್ಷಿಣ ಕನ್ನಡದ ಉಳ್ಳಾಲ ಕುಂಪಲದಲ್ಲಿ, ತಂದೆಯೇ ತನ್ನ ಮಗಳ ಮೇಲೆ 10 ವರ್ಷಗಳಿಂದ ಅತ್ಯಾ*ಚಾರ ಎಸಗುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮಾನಸಿಕವಾಗಿ ಕುಗ್ಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಕೌನ್ಸಿಲಿಂಗ್ ವೇಳೆ ಈ ಅಮಾನವೀಯ ಕೃತ್ಯ ಬಯಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಉಳ್ಳಾಲದ ಕುಂಪಲ ಪ್ರದೇಶದಲ್ಲಿ ಸಂಭವಿಸಿದ ಒಂದು ಬೆಚ್ಚಿಬೀಳಿಸುವ ಘಟನೆಯಲ್ಲಿ, ತಂದೆಯೇ ತನ್ನ ಮಗಳ ಮೇಲೆ ಕಳೆದ 10 ವರ್ಷಗಳಿಂದ ಅತ್ಯಾ*ಚಾರ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಂದೆ ಅಮೀರ್ (40) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಉಳ್ಳಾಲದ ಕುಂಪಲದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಅಪ್ರಾಪ್ತೆಯಾಗಿದ್ದಾಗಿನಿಂದಲೇ ಆರೋಪಿ ಮಲತಂದೆ ಅವಳ ಮೇಲೆ ಮೃಗದಂತೆ ವರ್ತಿಸುತ್ತಿದ್ದ.

ಕಿರುಚಾಡದಂತೆ ಬಾಯಿಗೆ ತಲೆದಿಂಬು ಇಟ್ಟ ಪಾಪಿ

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಾಲಕಿ ಅತ್ಯಾಚಾರದ ವೇಳೆ ಕಿರುಚಾಡಿದಾಗ ಅಮೀರ್ ಅವಳ ಬಾಯಿಗೆ ತಲೆದಿಂಬು ಇಟ್ಟು ಕಿರುಚಾಡದಂತೆ ತಡೆಯುತ್ತಿದ್ದ. ಕಿರುಕುಳ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದಂತೆ, ಬಾಲಕಿ ಅಜ್ಜಿಯ ಮನೆಯಲ್ಲಿ ವಾಸಿಸಿ ಶಾಲೆಗೆ ಹೋಗಲು ತೀರ್ಮಾನಿಸಿದಳು. ತಾಯಿಯ ಯೋಗ ಕ್ಷೇಮ ವಿಚಾರಿಸಲು ಮನೆಗೆ ಬಂದಾಗಲು ಸಮಯ ಸಾಧಿಸಿ ಮತ್ತೆ ಅತ್ಯಾ*ಚಾರ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಗೆ ದಾಖಲಾತಿ

ಕಳೆದ ಅಕ್ಟೋಬರ್ 18ರಂದು ಶನಿವಾರ, ಮಾನಸಿಕವಾಗಿ ಕುಗ್ಗಿದ್ದ ಅಪ್ರಾಪ್ತೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಕುಟುಂಬದವರು ಅವಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಯ ಭಾಗವಾಗಿ ನಡೆದ ಕೌನ್ಸಿಲಿಂಗ್ ವೇಳೆ, ಬಾಲಕಿ ತಂದೆಯಿಂದ ನಡೆದ ಅತ್ಯಾ*ಚಾರದ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾಳೆ.

ಪೋಕ್ಸೊ ಕಾಯ್ದೆಯಡಿ ಬಂಧನ

ಕೌನ್ಸಿಲಿಂಗ್ ಹಾಗೂ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ, ಉಳ್ಳಾಲ ಪೊಲೀಸರು ಆರೋಪಿ ಅಮೀರ್ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದ್ದು, ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶ ಹಾಗೂ ವಿಷಾದ ಮೂಡಿಸಿದೆ.