ಮಂಗಳೂರಿನ ಯುವ ಪ್ರತಿಭೆ ರೂಬನ್ ಜೇಸನ್ ಮಚಾದೊ, ಈಜುತ್ತಾ ಕೊಳಲು ನುಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ 700 ಮೀಟರ್‌ಗೂ ಹೆಚ್ಚು ದೂರ ಈಜಿ ಸಾಧನೆ ಮಾಡಿದ್ದಾರೆ.
ಮಂಗಳೂರು: ಸಾಮಾನ್ಯವಾಗಿ ಈಜುವುದೇ ಅನೇಕರಿಗೆ ಸವಾಲಿನ ವಿಷಯ. ಆದರೆ ಈಜುತ್ತಾ ಕೊಳಲು ನುಡಿಸುವುದೆಂದರೆ ಅಸಾಧ್ಯವೆನ್ನಿಸಬಹುದು. ಈ ಅಸಾಧ್ಯವನ್ನು ಸಾಧ್ಯಮಾಡಿ, ವಿಶ್ವದ ಗಮನ ಸೆಳೆದಿದ್ದಾರೆ ಮಂಗಳೂರಿನ ಯುವ ಪ್ರತಿಭೆ ರೂಬನ್ ಜೇಸನ್ ಮಚಾದೊ. ನಗರದ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ, ಅವರು ಕೊಳಲು ನುಡಿಸುತ್ತಾ ಬ್ಯಾಕ್‌ಸ್ಟ್ರೋಕ್ ಶೈಲಿಯಲ್ಲಿ ಈಜುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಅಸಾಧಾರಣ ಸಾಧನೆಗೆ ಬುಧವಾರ ಕಾಲೇಜು ಕ್ಯಾಂಪಸ್ ಸಾಕ್ಷಿಯಾಯಿತು.
700 ಮೀಟರ್ ಈಜುತ್ತಾ ಕೊಳಲು ನುಡಿಸಿದ ಅಪರೂಪದ ಸಾಧನೆ
ರೂಬನ್ ಅವರ ಪ್ರಾರಂಭಿಕ ಉದ್ದೇಶ ಕೇವಲ 300 ಮೀಟರ್ ದೂರ ಈಜುತ್ತಾ ಕೊಳಲು ನುಡಿಸುವುದಾಗಿತ್ತು. ಈಜುಕೊಳದ ಸುತ್ತಳತೆ ಸುಮಾರು 150 ಮೀಟರ್, ಅಂದರೆ ಎರಡು ಸುತ್ತು ಈಜಿದರೆ ದಾಖಲೆ ಸಿದ್ಧವಾಗುತ್ತಿತ್ತು. ಆದರೆ ಅವರು ಅದನ್ನು ಮೀರಿಸಿ, ಐದೂ ಕಾಲು ಸುತ್ತು (ಸುಮಾರು 700 ಮೀಟರ್‌ಗೂ ಅಧಿಕ) ಈಜಿದರು. ಈ ಮೂಲಕ, ರೂಬನ್ ಕೇವಲ ಗುರಿ ಮುಟ್ಟುವುದಲ್ಲದೆ, ಅದನ್ನು ಮೀರಿಸಿ ಅಸಾಧಾರಣ ಪ್ರದರ್ಶನ ನೀಡಿದರು. ಈ ಸಾಧನೆಗೆ ಸಾಕ್ಷಿಯಾದ ಎಲ್ಲರೂ ಅದ್ಭುತಗೊಂಡರು.
ವಿಶ್ವದಲ್ಲೇ ಮೊದಲ ಪ್ರಯತ್ನ – ಗೋಲ್ಡನ್ ಬುಕ್ ದಾಖಲೆ ದೃಢೀಕರಣ
ಈ ವಿಶಿಷ್ಟ ಪ್ರದರ್ಶನದ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯನ್ ಹೆಡ್ ಡಾ. ಮನೀಷ್ ಬಿಷ್ಣೋಯ್ ಉಪಸ್ಥಿತರಿದ್ದರು. ಅವರು ರೂಬನ್ ಜೇಸನ್ ಮಚಾದೊ ಅವರ ಸಾಧನೆ ಕುರಿತು ಮಾತನಾಡುತ್ತಾ, “ವಿಶ್ವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾರಾದರೂ ಈಜುಕೊಳದಲ್ಲಿ ಕೊಳಲು ನುಡಿಸುತ್ತಾ ಬ್ಯಾಕ್‌ಸ್ಟ್ರೋಕ್ ಶೈಲಿಯಲ್ಲಿ ಈಜಿದ್ದಾರೆ. ಈ ದಾಖಲೆಗೆ ಸಮವಾದದ್ದು ಇನ್ನೂ ಎಲ್ಲಿಯೂ ದಾಖಲಾಗಿಲ್ಲ,” ಎಂದು ಹೇಳಿದರು. ಈ ಸಂದರ್ಭದಲ್ಲಿ ರೂಬನ್ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರ ಹಾಗೂ ಪದಕವನ್ನು ಸಾಂಕೇತಿಕವಾಗಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಸಂಗೀತ ಲೋಕದಲ್ಲಿ ಪ್ರಖ್ಯಾತಿ ಪಡೆದ ಪ್ರತಿಭೆ
ರೂಬನ್ ಜೇಸನ್ ಮಚಾದೊ ಅವರು ಸಂತ ಅಲೋಶಿಯಸ್ ಸ್ನಾಯತ್ತ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮಾಜಿ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದಾರೆ. ಪ್ರಸ್ತುತ ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸಂಗೀತಕ್ಕೆ ಅರ್ಪಿಸಿಕೊಂಡಿದ್ದಾರೆ. ಅವರು ಬಾಲಿವುಡ್, ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಚಲನಚಿತ್ರೋದ್ಯಮಗಳಲ್ಲಿ ಪ್ರದರ್ಶನ ನೀಡುತ್ತಿರುವ ವೃತ್ತಿಪರ ಸಂಗೀತಗಾರರು. ಜೊತೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನ್‌ಲೈನ್ ಸಂಗೀತ ತರಗತಿಗಳನ್ನು ನಡೆಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ರೂಬನ್ ಕೇವಲ ಕೊಳಲು ವಾದ್ಯದಲ್ಲೇ ಅಲ್ಲ, ಸ್ಯಾಕ್ಸೋಫೋನ್, ಗಿಟಾರ್, ಹಾರ್ಮೋನಿಕಾ, ಟ್ರಂಪೆಟ್ ಸೇರಿದಂತೆ ಹಲವಾರು ವಾದ್ಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರ ಸಂಗೀತ ಮತ್ತು ಶಾರೀರಿಕ ಸಾಮರ್ಥ್ಯದ ಸಂಯೋಜನೆ, ಈ ದಾಖಲೆ ಪ್ರಯತ್ನದಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಮಂಗಳೂರಿನ ಗರ್ವ – ನವಯುಗದ ಸ್ಫೂರ್ತಿ
ರೂಬನ್ ಜೇಸನ್ ಮಚಾದೊ ಅವರ ಈ ಸಾಧನೆ ಕೇವಲ ವೈಯಕ್ತಿಕ ಜಯವಲ್ಲ, ಮಂಗಳೂರಿನ ಸಾಂಸ್ಕೃತಿಕ ಚೈತನ್ಯ ಮತ್ತು ಪ್ರತಿಭೆಯ ಪ್ರತೀಕವಾಗಿದೆ. ಯುವಕರಿಗೆ ಇದು ಸ್ಫೂರ್ತಿದಾಯಕ ಮಾದರಿಯಾಗಿದೆ. ಗೀತ ಮತ್ತು ಕ್ರೀಡೆಯ ಮಿಶ್ರಣದ ಮೂಲಕ ಅವರು ಸೃಜನಾತ್ಮಕ ಚಿಂತನೆ ಹಾಗೂ ಕಠಿಣ ಶ್ರಮದ ಶಕ್ತಿಯನ್ನು ವಿಶ್ವದ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ.
