ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ಸಾರ್ವಜನಿಕ ಶಾಂತಿ ಕದಡುವ ಚಟುಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ, ಪುತ್ತೂರು ಸಹಾಯಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಮಂಗಳೂರು: ಹಲವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲೆಯ ಹೊರಗೆ ಕಳುಹಿಸಲಾಗಿದೆ. ಗಡೀಪಾರು ಆದೇಶದ ಪ್ರಕಾರ, ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಲಾಗುತ್ತಿದೆ.

32 ಪ್ರಕರಣಗಳಲ್ಲಿ ಹೆಸರು

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿವಿಧ ಕಾನೂನು ಉಲ್ಲಂಘನೆ, ಅಶಾಂತಿ ಸೃಷ್ಟಿ ಹಾಗೂ ಸಮಾಜದಲ್ಲಿ ಅಸ್ಥಿರತೆ ಉಂಟುಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಾದಿತ ಘಟನೆಗಳಲ್ಲಿ ತೊಡಗಿಸಿಕೊಂಡ ಆರೋಪ

ತಿಮರೋಡಿ ಮೇಲೆ ಧರ್ಮಸ್ಥಳ ‘ಬುರುಡೆ ಪ್ರಕರಣ’ ಹಾಗು ‘ಶವ ಹೂತಿಟ್ಟ ಪ್ರಕರಣ’ಗಳಲ್ಲಿ ಆರೋಪಿಯಾಗಿದ್ದ ಚೆನ್ನಯ್ಯನಿಗೆ ಆಶ್ರಯ ನೀಡಿದ್ದ ಆರೋಪವೂ ಇದೆ. ಇದಲ್ಲದೇ ಸೌಜನ್ಯ ಹೋರಾಟ ಸೇರಿದಂತೆ ಹಲವು ಶಾಂತಿ ಕದಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಹಿನ್ನೆಲೆ, ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸೆಪ್ಟೆಂಬರ್ 20 ರಂದು ಆದೇಶ

ಪುತ್ತೂರು ಸಹಾಯಕ ಆಯುಕ್ತರು ಸೆಪ್ಟೆಂಬರ್ 20 ರಂದು ಅಧಿಕೃತವಾಗಿ ಗಡೀಪಾರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಈ ಕ್ರಮದ ಮೂಲಕ ಜಿಲ್ಲೆಯ ಜನರಲ್ಲಿ ಭಯ ಹಾಗೂ ಅಶಾಂತಿ ಕಡಿಮೆ ಮಾಡಿ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಮುಖ್ಯ ಉದ್ದೇಶ ಎಂದು ಆಡಳಿತ ವಲಯ ತಿಳಿಸಿದೆ.

ಪ್ರಕರಣ ಹಿನ್ನೆಲೆ 36 ಜನರ ಗಡೀಪಾರಿಗೆ ಕಾನೂನು ಪ್ರಕ್ರಿಯೆ

ಪೊಲೀಸ್‌ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 36 ಜನರ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. ಕಳೆದ ಜೂನ್ ತಿಂಗಳಲ್ಲಿ 36 ಜನರ ಲಿಸ್ಟ್ ರೆಡಿ ಮಾಡಿ ಕಾನೂನು ಪ್ರಕ್ರಿಯೆ ಆರಂಭ ಮಾಡಿತ್ತು. 21 ಹಿಂದೂಗಳು ಮತ್ತು 15 ಮುಸ್ಲಿಮ್‌ ಕಾರ್ಯಕರ್ತರ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ವಿಟ್ಲ, ಪುಂಜಾಲಕಟ್ಟೆ, ಬೆಳ್ತಂಗಡಿ, ಪುತ್ತೂರು ನಗರ ಮತ್ತು ಗ್ರಾಮಾಂತರ, ಕಡಬ, ಉಪ್ಪಿನಂಗಡಿ, ಸುಳ್ಯ ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಯ ಲಿಸ್ಟ್‌ ರೆಡಿ ಮಾಡಿದ್ದ ಪೊಲೀಸ್‌ ಇಲಾಖೆ ಇದರಲ್ಲಿ ಹಿಂದೂ ಮುಖಂಡರಾದ ಅರುಣ್‌ ಪುತ್ತಿಲ, ಮಹೇಶ್‌ ಶೆಟ್ಟಿ ತಿಮರೋಡಿ, ಭರತ್‌ ಕುಮ್ಡೇಲು, ಲತೇಶ್‌ ಗುಂಡ್ಯ ಸೇರಿ 21 ಜನರ ಗಡೀಪಾರು ಮಾಡಲು ಪಟ್ಟಿ ರೆಡಿ ಮಾಡಿತ್ತು.

ಇದರ ಜೊತೆಗೆ ಹಕೀಂ ಕೂರ್ನಡ್ಕ ಸೇರಿ 15 ಮುಸ್ಲಿಂ ಸಂಘಟನೆ ಕಾರ್ಯಕರ್ತರು ಕೂಡ ಈ ಗಡೀಪಾರು ಲಿಸ್ಟ್ ನಲ್ಲಿದ್ದರು. ಹೀಗೆ ಒಟ್ಟು 36 ಜನರನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದ್ದ ಪೊಲೀಸರು, ಇದೀಗ ಎಲ್ಲಾ ಕಾನೂನು ಪ್ರಕ್ರಿಯೆ ಬಳಿಕ ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ಆದೇಶ ಹೊರಡಿಸಲಾಗಿದೆ.