ಅಯ್ಯೋ ಮನೇಲಿ ದಿನಾಲೂ ಎಷ್ಟೂ ಅಂತಾ ಕೆಲಸ ಮಾಡಿಸ್ತೀರಿ. 2ನೇ ಹೆಂಡತಿಯ ಮಗಳು ಅಂತಾ ನೀವು ನನಗೆ ಇಷ್ಟೊಂದು ಕಷ್ಟಕೊಟ್ಟರೆ ಹೇಗೆ ಸಹಿಸಿಕೊಳ್ಳಲಿ. ನನಗೆ ಬದುಕಲು ಇಷ್ಟವಿಲ್ಲ, ನೀವೆಲ್ಲ ಇನ್ಮುಂದೆ ಸಂತೋಷವಾಗಿರಿ ಎಂದು ಡೆತ್‌ನೋಟ್ ಬರೆದಿಟ್ಟು ಇಬ್ಬರು ವಿದ್ಯಾರ್ಥಿಗಳು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಕೋಲಾರ (ಅ.06): ಕೌಟುಂಬಿಕ ಸಮಸ್ಯೆಗಳು ಮತ್ತು ನಿರಂತರ ಮಾನಸಿಕ ಕಿರುಕುಳಕ್ಕೆ ಮನನೊಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಇಬ್ಬರು 7ನೇ ತರಗತಿ ಓದುತ್ತಿದ್ದ ಬಾಲಕಿಯರು ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಇನ್ನು, ಅವರ ಸ್ಕೂಲ್ ಬ್ಯಾಗ್‌ನಲ್ಲಿ ಪತ್ತೆಯಾದ 'ಡೆತ್ ನೋಟ್' ಮೂಲಕ ಸಾವಿನ ಹಿಂದಿನ ದುಃಖಕರ ರಹಸ್ಯ ಬಯಲಾಗಿದೆ.

ಮುಳಬಾಗಿಲು ತಾಲೂಕಿನ ಯಳಚೇಪಲ್ಲಿ ಗ್ರಾಮದ ವಿದ್ಯಾರ್ಥಿನಿಯರಾದ ಚೈತ್ರಾಬಾಯಿ ಮತ್ತು ಧನ್ಯಬಾಯಿ ಅಕ್ಟೋಬರ್ 2 ರಂದು ನಾಪತ್ತೆಯಾಗಿದ್ದರು. ಅವರ ಶವವು ಅಕ್ಟೋಬರ್ 4 ರಂದು ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಸಾವಿನ ಬಗ್ಗೆ ಕುಟುಂಬಸ್ಥರು ನಿಗೂಢ ಅನುಮಾನ ವ್ಯಕ್ತಪಡಿಸಿದ್ದರಾದರೂ, ಪೊಲೀಸರ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿಯ ನಂತರ ಸತ್ಯಾಂಶ ಹೊರಬಿದ್ದಿದೆ.

ಕಷ್ಟಗಳ ಹಂಚಿಕೆ, ಆತ್ಮಹ*ತ್ಯೆಯ ನಿರ್ಧಾರ:

ಪೊಲೀಸರ ತನಿಖೆ ವೇಳೆ, ಬಾಲಕಿಯರ ಸ್ಕೂಲ್ ಬ್ಯಾಗ್ ಮತ್ತು ಜ್ಯಾಮಿಟ್ರಿ ಬಾಕ್ಸ್‌ನಲ್ಲಿ ಅವರು ಕೈಯಾರೆ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದೆ. ಈ ನೋಟ್‌ನಲ್ಲಿ ಅವರು ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಆತ್ಮಹ*ತ್ಯೆ ನಿರ್ಧಾರ ತೆಗೆದುಕೊಂಡಿರುವುದನ್ನು ಸ್ಪಷ್ಟವಾಗಿ ಬರೆದಿದ್ದಾರೆ.

ಸಾವಿಗೀಡಾದ ಬಾಲಕಿಯರ ಹಿನ್ನೆಲೆ:

ಧನ್ಯಬಾಯಿ: ಧನ್ಯಬಾಯಿ ತಂದೆ ಈಶ್ವರ್ ರಾವ್ ಅವರು ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದಾರೆ. ಧನ್ಯಬಾಯಿ ಈಶ್ವರ್ ರಾವ್ ಅವರ 2ನೇ ಪತ್ನಿಯ ಮಗಳು. ಮನೆಯಲ್ಲಿ ಧನ್ಯಳಿಗೆ ಪೋಷಕರಿಂದ ನಿರಂತರವಾಗಿ ಮಾನಸಿಕ ಕಿರುಕುಳ ಇತ್ತು. ಸದಾ ಮನೆಯ ಕೆಲಸ ಮಾಡಿಸಿಕೊಂಡು, ಚೆನ್ನಾಗಿ ನೋಡಿಕೊಳ್ಳದ ಕಾರಣ ಧನ್ಯಬಾಯಿ ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ, 'ನನಗೆ ಬದುಕಲು ಇಷ್ಟವಿಲ್ಲ, ನೀವೆಲ್ಲ ಇನ್ಮುಂದೆ ಸಂತೋಷವಾಗಿರಿ' ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಚೈತ್ರಾಬಾಯಿ: ಚೈತ್ರಾಬಾಯಿ ತಾಯಿ ಎರಡು ವರ್ಷಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಂದೆ ಸದಾ ಮದ್ಯದ ಮತ್ತಿನಲ್ಲಿರುವ ಕಾರಣ ತಂದೆ ಪ್ರೀತಿಯಿಂದ ವಂಚಿತಳಾಗಿದ್ದಳು. ಜೊತೆಗೆ, ಬಾಲಕಿ ಚೈತ್ರಾ ತನ್ನ ಮಾವನ ಆಶ್ರಯದಲ್ಲಿ ಬೆಳೆಯುತ್ತಿದ್ದಳು. ಈ ಪರಿಸ್ಥಿತಿಯಿಂದ ಚೈತ್ರಾ ಸಹ ತೀವ್ರ ದುಃಖಿತಳಾಗಿದ್ದಳು.

ಇಬ್ಬರೂ ಬಾಲಕಿಯರು ಶಾಲೆಗೆ ಹೋಗಿ ಬರುವಾಗ ತಮ್ಮ ಕಷ್ಟಗಳನ್ನು ಪರಸ್ಪರ ಹೇಳಿಕೊಂಡು, ನಾವು ಭೂಮಿ ಮೇಲೆ ಬದುಕಿರುವುದೇ ಬೇಡ, ಮನೆಯವರು ಚೆನ್ನಾಗಿರಲಿ' ಎಂಬ ನಿರ್ಧಾರಕ್ಕೆ ಬಂದು ಊರ ಹೊರಭಾಗದಲ್ಲಿರುವ ಬಾವಿಗೆ ಬಿದ್ದು ಆತ್ಮಹ*ತ್ಯೆ ಮಾಡಿಕೊಂಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣ ದಾಖಲು ಮತ್ತು ಮುಂದಿನ ಕ್ರಮ:

ಈ ಘಟನೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಡೆತ್ ನೋಟ್ ಮತ್ತು ಮರಣೋತ್ತರ ಪರೀಕ್ಷೆ ವರದಿಯ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಬಾಲಕಿಯರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಕೌಟುಂಬಿಕ ಕಿರುಕುಳದ ಆರೋಪಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇಂತಹ ದುರ್ಘಟನೆಗಳು ಸಂಭವಿಸದಂತೆ ಮಕ್ಕಳ ಪಾಲನೆಯ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆಯನ್ನು ಈ ಘಟನೆ ಸೂಚಿಸುತ್ತದೆ.